ಹಲ್ಲಿ ಬಿದ್ದ ಊಟ ಸೇವಿಸಿ 50 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಯಚೂರು ನಗರದ ಚಂದ್ರಬಂಡಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ನಡೆದಿದೆ .
ವಿದ್ಯಾರ್ಥಿಗಳು ಬೆಳಗಿನ ಉಪಹಾರ ಪುಲಾವ್ ಅನ್ನ ಊಟ ಮಾಡಿದ ಸ್ವಲ್ಪ ಹೊತ್ತಲ್ಲೇ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಸತ್ತ ಹಲ್ಲಿಯ ಮೌಂಸದ ತುಂಡು ಪುಲಾವ್ ಅನ್ನದಲ್ಲಿ ಬಿದ್ದಿತ್ತು. ಮಕ್ಕಳು ಅದೇ ಅನ್ನ ಸೇವಿಸಿದ ಕಾರಣಕ್ಕೆ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದ ಕೆಲ ಮಕ್ಕಳು ಗುಣಮುಖರಾಗಿದ್ದಾರೆ ಎಂದು ಮಾಹಿತಿ ಬಂದಿದೆ.
ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ರಾಯಚೂರು ಡಿಹೆಚ್ಓ ಡಾ.ಸುರೇಂದ್ರ ಬಾಬು ಮಕ್ಕಳ ಆರೋಗ್ಯ ವಿಚಾರಿಸಿ ಘಟನೆಯ ವಿವರ ಪಡೆದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಟ್ಟು 300 ಮಕ್ಕಳಿದ್ದಾರೆ. ಹೀಗಾಗಿ ಊಟ ಸೇವಿಸಿದ ಉಳಿದ ಕೆಲ ಮಕ್ಕಳು ಅಸ್ವಸ್ಥರಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ .
ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ.ಕಾಮ್ ಜೊತೆ ವಸತಿ ನಿಲಯ ವಾರ್ಡನ್ ರವಿ ಮಾತನಾಡಿ, ʼಊಟದಲ್ಲಿ ಹಲ್ಲಿ ಬಿದ್ದಿಲ್ಲ, ನಿಲಯದಲ್ಲಿ ಸುಮಾರು 300 ವಿದ್ಯಾರ್ಥಿಗಳು ಅದೇ ಉಪಹಾರ ಸೇವಿಸಿದ್ದಾರೆ. ಹಲ್ಲಿ ಮೌಂಸದ ತುಂಡು ಇದೆ ಎಂದು ವಿದ್ಯಾರ್ಥಿಗಳು ಗಾಳಿ ಸುದ್ದಿ ಹಬ್ಬಿಸಿದರು. ಅದನ್ನೇ ಕೇಳಿದ ಕೆಲ ವಿದ್ಯಾರ್ಥಿಗಳು ಆತಂಕಗೊಂಡು ವಾಂತಿ ಮಾಡಿದ್ದಾರೆ. ನಾವು ತಕ್ಷಣವೇ ವೈದ್ಯರಿಗೆ ಕರೆಸಿ ಮಕ್ಕಳಿಗೆ ಚಿಕಿತ್ಸೆ ನೀಡಿದ್ದೇವೆ. ಯಾವುದೇ ದೊಡ್ಡ ಸಮಸ್ಯೆ ಕಂಡು ಬಂದಿಲ್ಲ. ಸದ್ಯ ಎಲ್ಲ ಮಕ್ಕಳು ಗುಣಮುಖರಾಗಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹದಗೆಟ್ಟ ರಸ್ತೆ : ಕೊಳಚೆ ನೀರಿನಲ್ಲಿ ಭತ್ತದ ಸಸಿ ನೆಟ್ಟು ಪ್ರತಿಭಟನೆ
ವಿಷಯ ತಿಳಿದು ಆಸ್ಪತ್ರೆಗೆ ಜಿಲ್ಲಾಧಿಕಾರಿ ಕೆ.ನಿತೀಶ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.