ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ಅವರು ಮೈಸೂರು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಮಳೆ ಹಾನಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಲಹೆ, ಸೂಚನೆ ನೀಡಿದರು.
ಅವಧಿಗೂ ಮುನ್ನ ಜಿಲ್ಲೆಯಾದ್ಯಂತ ಮುಂಗಾರು ಮಳೆಯಾಗುತ್ತಿದ್ದು, ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಮಳೆಯಿಂದ ಹಾನಿ ಉಂಟಾದರೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು.
ಜಲಾಶಯಗಳ ನೀರಿನ ಮಟ್ಟ ಹಾಗೂ ಒಳ ಹರಿವು ಬಗ್ಗೆ ಮಾಹಿತಿ ಪಡೆದರು.
ಮಳೆಯಿಂದಾಗಿ ನಂಜನಗೂಡು ತಾಲ್ಲೂಕಿನಲ್ಲಿ ಆರು ಪ್ರಾಣಿಗಳು ಹಾನಿಗೊಳಗಾಗಿ ರೈತರಿಗೆ ನಷ್ಟವಾಗಿದೆ. ಕೂಡಲೇ ಸೂಕ್ತ ಪರಿಹಾರ ದೊರಕಿಸಕೊಡಬೇಕು. 146 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಶೀಘ್ರವಾಗಿ ಸರಿಪಡಿಸಬೇಕು. ಅಧಿಕ ಮಳೆಯಾದ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಹಾಗೂ ಕೊಳವೇ ಬಾವಿಗಳಿಗೆ ಮಳೆ ನೀರು ಹರಿಯುವುದನ್ನು ತಡೆಗಟ್ಟಲು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಕಲುಷಿತವಾಗಬಾರದು ಎಂದು ನಿರ್ದೇಶನ ನೀಡಿದರು.
ನಿರೀಕ್ಷೆಗಿಂತ ಹೆಚ್ಚು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಸಂದರ್ಭದಲ್ಲಿ ಬಿತ್ತನೆ ಸಿದ್ಧತೆಯಲ್ಲಿರುವ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಅಗತ್ಯವಿರುವಷ್ಟು ಬಿತ್ತನೆ ಬೀಜ ಹಾಗೂ ರಸ ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸೂಚನೆ ನೀಡಿದರು.

ಪೊಟಾಸಿಯಂ ಬಳಕೆ ಹೆಚ್ಚಾದಷ್ಟು ಮಣ್ಣಿನ ಫಲವತ್ತತೆಯು ಕಡಿಮೆಯಾಗುತ್ತದೆ. ಇದನ್ನು ಕಡಿಮೆ ಉಪಯೋಗಿಸುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ವಾಜಮಂಗಲ, ಸಿಂಧೂವಳ್ಳಿ, ಹಲ್ಲೆರೆ, ಹುಲ್ಲಹಳ್ಳಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದಂತಹ ಅಹಿತರ ಘಟನೆಗಳು ಸಂಭವಿಸಬಾರದು. ಈ ಸಂಬಂಧ ಪೊಲೀಸ್ ಇಲಾಖೆಯು ಕಟ್ಟೆಚ್ಚರವಹಿಸಬೇಕು. ಬಾಬಾ ಸಾಹೇಬರಂತಹ ಮಹನೀಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಯಾರಿಂದಲೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕ್ರಮವಹಿಸಬೇಕು. ಹೋರಾಟ, ಪ್ರತಿಭಟನೆಗಳು ಕಾನೂನಿನ ಪ್ರಕಾರ ಶಾಂತಿಯುತವಾಗಿ ನಡೆಯಬೇಕು. ಅನಗತ್ಯವಾಗಿ ಕಾನೂನು ಉಲ್ಲಂಘಿಸುವ ಘಟನೆಗಳು ಜರುಗಬಾರದು.

ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣಗಳ ದಾಖಲಾಗುತ್ತಿವೆ. ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಬೇಕು. ಕೋವಿಡ್ ಲಕ್ಷಣಗಳ ಕಂಡುಬಂದ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಕೂರಬಾರದು. ಸಮಸ್ಯೆ ಕಾಣಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಬೇಕು. ಜನರ ನಡುವೆ ಇದ್ದುಕೊಂಡು ಸರ್ಕಾರವು ನಿಮ್ಮ ಜೊತೆ ಇದೆ ಎಂದು ಧೈರ್ಯ ತುಂಬಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿಗರಿಂದ ಅವಹೇಳನಕಾರಿ ಹೇಳಿಕೆ; ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಡಿಸಿಪಿ ಕೆ.ಎಸ್.ಸುಂದರ್ ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎ. ಎಸ್. ರಂಜಿತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ, ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಸುನೀಲ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಇದ್ದರು.