ಕಂದಾಯ ಇಲಾಖೆ ಎಲ್ಲಾ ನೌಕರರ ಸಹಕಾರದಿಂದ ಜನಪರವಾಗುತ್ತಿದೆ, ಪರಿವರ್ತನೆಯ ಹಾದಿಯಲ್ಲಿದೆ ಹಾಗೂ ಹೊಸ ಆಧುನಿಕ ತಂತ್ರಜ್ಞಾನಕ್ಕೂ ಒಗ್ಗಿಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಇಂದು ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಸರ್ವೇ ಇಲಾಖೆ ಇಡೀ ಸರ್ಕಾರಕ್ಕೆ ಮೂಲ ಇಲಾಖೆ. ಯಾವುದೇ ಭೂಮಿಗೆ ದಾಖಲೆಗಳ ಮೂಲಕ ಅಸ್ಥಿತ್ವ ಕಲ್ಪಿಸುವ ಮಹತ್ವದ ಕಾರ್ಯ ಸರ್ವೇ ಇಲಾಖೆಯದ್ದು. ಹೀಗಾಗಿ ಈ ಇಲಾಖೆಯನ್ನು ನೌಕರರ ಸಹಕಾರದಿಂದ ಹೊಸ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡಲಾಗಿದೆ. ಆ ಮೂಲಕ ಇಲಾಖೆಯನ್ನು ಮತ್ತಷ್ಟು ಜನಪರಗೊಳಿಸುವ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಲಾಗುತ್ತಿದೆ” ಎಂದರು.
“ಹತ್ತಾರು ವರ್ಷಗಳಿಂದ ಬಾಕಿ ಇದ್ದ ರೈತರ ಕೆಲಸಗಳನ್ನು ಕಳೆದ ಎರಡು ವರ್ಷಗಳಲ್ಲಿ ಅಭಿಯಾನದ ಮಾದರಿಯಲ್ಲಿ ನಡೆಸಲಾಗುತ್ತಿದೆ. ಗ್ರಾಮಠಾಣಾ ಹಾಗೂ ನಗರ ಪ್ರದೇಶಗಳಲ್ಲಿ ಜನ ನೆಮ್ಮದಿಯಿಂದ ಜೀವಿಸಲು ಆಸ್ತಿಯ ನಕ್ಷೆ ಅವಶ್ಯ ಎಂದು ಅರ್ಥ ಮಾಡಿಕೊಂಡು ಸ್ವಾಮಿತ್ವ ಯೋಜನೆಯ ಅಡಿ ಗ್ರಾಮಠಾಣಾಗಳನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ವೇ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಜೊತೆಗೆ ನಗರ ಆಸ್ತಿ ಮಾಲಿಕತ್ವವನ್ನೂ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಅನುಕರಿಸಿ ಕೇಂದ್ರ ಸರ್ಕಾರ ದೇಶಾದ್ಯಂತ ʼನಕ್ಷಾʼ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ರಾಜ್ಯದಲ್ಲೂ 10 ಗ್ರಾಮ ಪಂಚಾಯತ್ ಹಾಗೂ ನಗರ ಸಭೆ ಆಯ್ಕೆ ಮಾಡಿಕೊಂಡು ಕಳೆದ ಮೂರು ತಿಂಗಳಿಂದ ಗ್ರಾಮೀಣ-ನಗರ ಪ್ರದೆಶಗಳಲ್ಲಿ ವಸತಿ ನಿವೇಶನಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡುತ್ತಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ಎಂದು” ಹರ್ಷ ವ್ಯಕ್ತಪಡಿಸಿದರು.

ಸರ್ವೇ ಕೆಲಸಗಳಿಗೆ ರೋವರ್ ತಂತ್ರಜ್ಞಾನ:
ಕಂಪ್ಯೂಟರ್ ಜಗತ್ತಿನಲ್ಲೂ ಸಹ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದ ಅವರು, “ನೂರಾರು ವರ್ಷಗಳಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಲು ಕನಿಷ್ಟ 70 ನಿಮಿಷ, ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ” ಎಂದು ಮಾಹಿತಿ ನೀಡಿದರು.
“ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಇಲಾಖೆ ಕೆಲಸ ಮಾಡುವ ರೀತಿ ನೀತಿಗಳು ಮಾತ್ರ ಬದಲಾಗಿಲ್ಲ. ಆದರೆ, ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡೋಕೆ ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ. ಅಲ್ಲದೆ, ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಹಲವರು ಇಂದಿಗೂ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು ಅಗತ್ಯ” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆಯೇ 775 ರೋವರ್ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರು. ಪ್ರಸ್ತುತ 5 ಸಾವಿರ ರೋವರ್ ಖರೀದಿಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂ ಮಾಪಕರಿಗೂ ಒಂದು ರೋವರ್ ನೀಡುವುದು ಹಾಗೂ ಸರ್ವೇ ನಕ್ಷೆ ನೂರಕ್ಕೆ ನೂರು ಗಣಕೀರಣಗೊಳಿಸುವುದು ನಮ್ಮ ಗುರಿ” ಎಂದು ತಿಳಿಸಿದರು.

ಎಂಟೇ ದಿನಕ್ಕೆ ಹದ್ದುಬಸ್ತು:
“11 ಇ ಸ್ಕೆಚ್ ಜಮೀನಿನ ಹದ್ದುಬಸ್ತು, ತತ್ಕಾಲ್ ಪೋಡಿ, ಇ ಸ್ವತ್ತು, ಸ್ವಾವಲಂಬಿ, ಭೂ ಮಂಜೂರಿ ಪ್ರಕರಣಗಳ ಸರ್ವೇ, ಕೆರೆ ಬಂಡಿದಾರಿ ಸರ್ವೇ, ಭೂ ಪರಿವರ್ತನೆ ಸರ್ವೇ, ಕಂದಾಯ ಅರಣ್ಯ ಗಡಿ ನಿಗದಿಗೊಳಿಸುವ ಜಂಟಿ ಸರ್ವೇ.. ಇವು ನಮ್ಮ ಇಲಾಖೆಯ ಪ್ರಮುಖ ಕೆಲಸ. ಕಳೆದ 23 ತಿಂಗಳಲ್ಲಿ ಈವರೆಗೆ 26 ಲಕ್ಷ ಸರ್ವೇ ಪ್ರಕರಣಗಳನ್ನು ಜನತೆಗೆ ಮಾಡಿಕೊಟ್ಟಿದ್ದೇವೆ. ಒಂದು ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ಪ್ರಕರಣಗಳ್ನು ಸರ್ವೇ ಮಾಡಿಕೊಡಲಾಗುತ್ತಿದೆ” ಎಂದು ಅವರು ತಿಳಿಸಿದರು.
“ಕಾಂಗ್ರೆಸ್ ಸರ್ಕಾರ ಬರುವ ಮೊದಲು ಹದ್ದುಬಸ್ತಿಗೆ ಒಂದು ಅರ್ಜಿ ಕೊಟ್ರೆ ಸುಮಾರು 3 ರಿಂದ 6 ತಿಂಗಳಾಗುತ್ತಿತ್ತು. ಆದರೆ ಈಗ ಗರಿಷ್ಟ 8 ದಿನದಲ್ಲಿ ಹದ್ದುಬಸ್ತು ಮಾಡಿಕೊಡಲಾಗುತ್ತಿದೆ. ಹಾವೇರಿಯಲ್ಲಿ ಒಂದು ಹದ್ದುಬಸ್ತು ಸರ್ವೇಗೆ 2 ವರ್ಷ ಆದರೂ ಆಗಿಲ್ಲ ಎಂದು ಶಾಸಕರೇ ನನ್ನನ್ನು ಪ್ರಶ್ನೆ ಮಾಡಿದ್ರು. ಈ ಬಗ್ಗೆ ನಾನು ವಿಚಾರಿಸಿದಾಗ ಆ ದೂರು ನಿಜವಾಗಿತ್ತು. ನಮ್ಮ ಹಿಂದಿನ ಸಿಎಂ ಹಾವೇರಿ ಜಿಲ್ಲೆಯವರೇ ಆಗಿದ್ದರು. ನಾನು ಇಂದಿನ ಡೇಟಾ ಪ್ರಕಾರ ಹೇಳೋದಾದ್ರೆ 8 ದಿನಕ್ಕೆ ಹದ್ದುಬಸ್ತು ಮತ್ತು ಕೇವಲ ಮೂರು ದಿನಕ್ಕೆ 11ಇ ಸ್ಕೆಚ್ ಮಾಡಿಕೊಡಲಾಗುತ್ತಿದೆ. ಈ ಮೊದಲು ತಿಂಗಳಾನುಗಟ್ಟಲೆ ಕಾಯಬೇಕಾದ್ದ ಪರಿಸ್ಥಿತಿಯನ್ನು ಬದಲಿಸಿದ್ದೇವೆ” ಎಂದರು.
ದುರಸ್ಥಿ ಕೆಲಸಕ್ಕೆ ಹೆಚ್ಚಿನ ಒತ್ತು:
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲೂಕು ಕಚೇರಿ, ಸರ್ವೆ ಕಚೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ. ಆದರೆ ಆ ಪರಿಸ್ಥಿತಿಯನ್ನು ಬದಲಾಯಿಸಲಾಗಿದೆ” ಎಂದರು.

“ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆ ಇಲಾಖೆ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಿತ್ತು. ಪರಿಣಾಮ ಸರಳೀಕೃತ ದುರಸ್ಥಿ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗ ಇಲಾಖೆಯ ನೌಕರರ ಸಹಾಯದಿಂದ ಎಲ್ಲವನ್ನೂ ಆನ್‌ಲೈನ್ ಮೂಲಕವೇ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 20 ಸಾವಿರ ರೈತರಿಗೆ ದುರಸ್ಥಿ ಮಾಡಿಕೊಟ್ಟಿದ್ದೇವೆ. ಅಲ್ಲದೆ, ಒಂದು ರೂಪಾಯಿಯೂ ಲಂಚವಿಲ್ಲದೆ ಪಾರದರ್ಶಕವಾಗಿ ಈ ಕೆಲಸವನ್ನು ಮಾಡಲಾಗುತ್ತಿದೆ ಎಂಬುದು ಗಮನಾರ್ಹ” ಎಂದರು.
ಇದನ್ನೂ ಓದಿ: ಬೆಂಗಳೂರು | ಆರು ತಿಂಗಳಲ್ಲಿ ಸುಮಾರು 27,000 ಪ್ರಕರಣಗಳಿಂದ ಮೆಟ್ರೋ ರೈಲು ನಿಯಮ ಉಲ್ಲಂಘನೆ
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.