ಅಕ್ಕಿ, ಹಸಿವು, ಅಮೆರಿಕಾ ಮತ್ತು ಇಂದಿರಾಗಾಂಧಿ

Date:

Advertisements
ಅನ್ನಭಾಗ್ಯದ ಯೋಜನೆಗೆ ಅಕ್ಕಿಯನ್ನು ನಿರಾಕರಿಸುತ್ತಿರುವ ನಮ್ಮದೇ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯನ್ನೇ ಅವತ್ತು ಅಮೆರಿಕಾದ ಲಿಂಡೆನ್ ಜಾನ್ಸನ್ ತೋರಿದ್ದ. ದೇಶದ ಸ್ವಾಭಿಮಾನವನ್ನು ಕೆಣಕಿದ್ದ. ಇಂದಿರಾಗಾಂಧಿಯ ಕನಸಿನಂತೆ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಈ ನೆಲದ ರೈತ ಆ ದುರಹಂಕಾರಿಗೆ ತಕ್ಕ ಉತ್ತರ ಕೊಟ್ಟಿದ್ದ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ, ಹಳೆಯದೆಲ್ಲ ಮತ್ತೆ ನೆನಪಾಗುತ್ತಿದೆ. 

ಬಹಳ ಜನರಿಗೆ ಇದು ಅನಿರೀಕ್ಷಿತ ಆಘಾತವೆನಿಸಿರಬಹುದು, ಆದರೆ ಇದು ನಿರೀಕ್ಷಿತ ಬೆಳವಣಿಗೆ. ಯಾವಾಗ ಚುನಾವಣಾ ಪ್ರಚಾರಕ್ಕೆಂದು ಬಂದಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರ್ನಾಟಕದ ಮತದಾರರ ಮುಂದೆ ನಿಂತು ’ಬಿಜೆಪಿಯನ್ನು ನೀವು ಸೋಲಿಸಿದರೆ ಕೇಂದ್ರದಿಂದ ಬರುವ ಯೋಜನೆಗಳು ರದ್ದಾಗುತ್ತವೆ’ ಎಂದು ಭಾಷಣ ಮಾಡಿದರೋ ಆಗಲೇ ಬಿಜೆಪಿ ಎಂಥಾ ಸೇಡಿನ ರಾಜಕಾರಣ ಮಾಡಬಹುದು ಅನ್ನೋದು ಸಾಬೀತಾಗಿತ್ತು. ಅದೀಗ ಕಾರ್ಯಾಚರಣೆಗೆ ಬರುತ್ತಿದೆಯಷ್ಟೆ. ಹಾಗಾಗಿ ಅಕ್ಕಿ ಒದಗಿಸಲು ಸಮ್ಮತಿ ನೀಡಿದ್ದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವು ಹಠಾತ್ತನೆ, ಅಕ್ಕಿ ಪೂರೈಕೆ ಮಾಡಲಾಗುವುದಿಲ್ಲ ಎಂಬ ನೀತಿಗೆ ಜೋತು ಬಿದ್ದಿರುವುದು ಆಘಾತಕಾರಿಯೇನೂ ಅಲ್ಲ.

ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೆ, ಕಾಂಗ್ರೆಸ್‌ನ ವರ್ಚಸ್ಸು ಹೆಚ್ಚಾಗಿಬಿಡುತ್ತದೆ ಎನ್ನುವುದಷ್ಟೇ ಬಿಜೆಪಿಯ ಆತಂಕವಲ್ಲ; ಬಹಳ ಕಷ್ಟಪಟ್ಟು ಜನರ ಮನಸ್ಸಿನಲ್ಲಿ ತಾನು ನೆಲೆಗೊಳಿಸಿರುವ ಧರ್ಮ ಮತ್ತು ದ್ವೇಷ ರಾಜಕಾರಣದ ಪ್ರಭಾವ ಕುಗ್ಗಿ, ಆ ಜಾಗದಲ್ಲಿ ಅಭಿವೃದ್ಧಿ ಆಧಾರಿತ ರಾಜಕಾರಣದ ಚರ್ಚೆ ಮರುಸ್ಥಾಪನೆಗೊಂಡರೆ ತನ್ನ ರಾಜಕೀಯದ ವೇಗ ಹಲವು ದಶಕಗಳಷ್ಟು ಹಿಂದಕ್ಕೆ ಜಾರಿಹೋಗಲಿದೆ ಎಂಬುದು ಅದರ ನಿಜವಾದ ಆತಂಕ. ಆ ಕಾರಣಕ್ಕೇ, ನೈತಿಕತೆ ಮತ್ತು ಹೊಣೆಗಾರಿಕೆಯ ಎಲ್ಲಾ ಲಜ್ಜೆಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಮೇಲಿನ ಸೇಡು ಹೆಚ್ಚೆನಿಸುತ್ತಿದೆಯೇ ವಿನಾ, ಜನರ ಹಸಿವು ಮುಖ್ಯವಾಗುತ್ತಿಲ್ಲ. ಒಂದು ಕ್ಷುಲ್ಲಕ ರಾಜಕೀಯ ಆಟ ಕಣ್ಣಮುಂದೆ ನಡೆಯುತ್ತಿದೆ. ಒಂದುಕಡೆ ಕೇಂದ್ರ ಸರ್ಕಾರವು ಎಫ್‌ಸಿಐ ಮೂಲಕ ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿಸಿದರೆ, ಮತ್ತೊಂದೆಡೆ ರಾಜ್ಯ ಬಿಜೆಪಿಯ ನಾಯಕರು, ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು, ಜುಲೈ 1ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ತೊಟ್ಟಿಲನ್ನೂ ತೂಗಿ, ಮಗುವನ್ನೂ ಚಿವುಟೋದು ಅಂದ್ರೆ ಇದೇ ಇರಬೇಕೇನೊ! ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಆದರೆ ಅಕ್ಕಿ ಮತ್ತು ಹಸಿವನ್ನು ನೆಪವಾಗಿಟ್ಟುಕೊಂಡು ಆಡಿದ ಆಟಗಳು ಭಾರತದ ಮಣ್ಣಿಗೆ ಇದೇನು ಹೊಸತಲ್ಲ. ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ, ಅಮೆರಿಕಾದ ಅಧ್ಯಕ್ಷನಾಗಿದ್ದ ಲಿಂಡನ್ ಜಾನ್ಸನ್ ಎಂಬ ಪರಮ ತಿಕ್ಕಲು ಮನುಷ್ಯ ಕೂಡಾ ಅಕ್ಕಿಯ ವಿಚಾರದಲ್ಲಿ ಮೊಂಡಾಟ ಮಾಡಿದ್ದ. ದೇಶದ ಸ್ವಾಭಿಮಾನವನ್ನೂ, ಬಡವರ ಹಸಿವನ್ನೂ ಹೀನಾಯವಾಗಿ ಲೇವಡಿ ಮಾಡಿದ್ದ. ಅದಕ್ಕೆ ಇಂದಿರಾಗಾಂಧಿ ಕೊಟ್ಟ ಪ್ರತ್ಯುತ್ತರವೇ ‘ಹಸಿರುಕ್ರಾಂತಿ’. ಯಾವ ಅಕ್ಕಿ ಮತ್ತು ಆಹಾರ ದಾಸ್ತಾನನ್ನು ನೆಪವಾಗಿಟ್ಟುಕೊಂಡು ಲಿಂಡನ್ ರಾಜಕೀಯ ಉದ್ದಟತನ ತೋರಿದ್ದನೋ, ಅದೇ ಆಹಾರ ಸಾಮಗ್ರಿಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ದೇಶವನ್ನ ಸಶಕ್ತಗೊಳಿಸಿದ್ದರು ಇಂದಿರಾಗಾಂಧಿ!

Advertisements

ಕರ್ನಾಟಕ ರಾಜ್ಯ ರೈತ ಸಂಘದ ಹಾಲಿ ಅಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರ ಜೀವನಚರಿತ್ರೆ ‘ಹಸಿರು ಹಾದಿಯ ಕಥನ’ ಕೃತಿಯಲ್ಲಿ ಈ ರೋಚಕ ಚರಿತ್ರೆಯ ವಿವರಣೆಯಿದೆ. ಅದನ್ನಿಲ್ಲಿ ಯಥಾವತ್ತಾಗಿ ಹಂಚಿಕೊಳ್ಳುತ್ತಿದ್ದೇನೆ.

“….ಅರವತ್ತರ ದಶಕದಲ್ಲಿ ಭಾರತದ ಹಸಿವು ಯಾವ ಮಟ್ಟದಲ್ಲಿತ್ತೆಂದರೆ ಅಂದಿನ ಪ್ರಧಾನಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು, ಇಡೀ ದೇಶದ ಜನರಿಗೆ ’ಸೋಮವಾರ ರಾತ್ರಿ ಒಂದೊತ್ತಿನ ಉಪವಾಸ’ ಆಚರಿಸುವಂತೆ ಕರೆ ಕೊಟ್ಟಿದ್ದರು. 1965 ಭಾರತ ಪಾಕಿಸ್ತಾನ್ ಯುದ್ಧದ ಸಮಯವದು. ಹೊರಗಡೆ ಶತ್ರುವಿನೊಂದಿಗೆ ಕಾದಾಡುವುದು ಎಷ್ಟು ದೊಡ್ಡ ಸವಾಲಾಗಿತ್ತೊ, ಆಂತರಿಕ ಹಸಿವಿನೊಂದಿಗೆ ಸಂಘರ್ಷಿಸುವುದೋ ಅಷ್ಟೆ ದೊಡ್ಡ ಸಮಸ್ಯೆಯಾಗಿತ್ತು. ಯಾಕೆಂದರೆ, ಆಗ ಭಾರತದ ಬಳಿ ರಕ್ಷಣಾ ಇಲಾಖೆಗೆ ಖರ್ಚು ಮಾಡಲು ಹೆಚ್ಚುವರಿ ಹಣವೂ ಇರಲಿಲ್ಲ, ಹಸಿವನ್ನು ನೀಗಿಸುವಷ್ಟು ಉತ್ಪಾದನೆಯೂ ಇರಲಿಲ್ಲ. ಆದರೆ ಯುದ್ಧ ಬಂದು ಬಾಗಿಲಲ್ಲಿ ನಿಂತಿತ್ತು. ಹಸಿವು ಅಭ್ಯಾಸವಾಗಿ ಹೋಗಿದ್ದ ಭಾರತೀಯರಿಗೆ ಒಂದೊತ್ತಿನ ಉಪವಾಸ ಬೋಧಿಸಿದ ಪ್ರಧಾನಿಗಳು ಆ ಪಡಿತರ ಅನುದಾನವನ್ನು ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡರು. ಯುದ್ಧ ನಡೆಯುವಷ್ಟು ಕಾಲವೂ ಆ ಉಪವಾಸ ಆಚರಣೆ ಜಾರಿಯಲ್ಲಿತ್ತು. ದೇಶಕ್ಕಾಗಿ ಉಪವಾಸ ಎಂಬ ನೆಪದಲ್ಲಿ ನಮ್ಮೊಳಗೆ ಅಂತರ್ಗತವಾಗಿದ್ದ ಹಸಿವನ್ನು ಅಡಗಿಸಿಕೊಂಡ ಬಗೆ ಅದು. ಯುದ್ಧಕಾಲದಲ್ಲಿ ದೇಶದೊಳಗಿನ ಜನ ಹಸಿವಿನ ಹಾಹಾಕಾರದಿಂದ ಬಂಡೆದ್ದರೆ ದೇಶ ನಿಶ್ಯಕ್ತಗೊಳ್ಳಲಿದೆ ಎಂಬ ಅವರ ಮುಂದಾಲೋಚನೆ ದೇಶದ ಜನರನ್ನು ಹಸಿವನ್ನು ನಿಯಂತ್ರಿಸಿಕೊಳ್ಳುವಂತೆ ಮಾಡಿತ್ತು. ಇದಕ್ಕೆ ಕಾರಣವೂ ಉಂಟು.

“ಕರಾಳ ಬ್ರಿಟಿಷ್ ವಸಾಹತುಶಾಹಿಯಿಂದ ಆಗಷ್ಟೆ ಹೊರಬಂದಿದ್ದ ನಮ್ಮ ದೇಶಕ್ಕೆ ಅಮೆರಿಕಾವು ಫುಡ್ ಫಾರ್ ಪೀಸ್ (ಶಾಂತಿಗಾಗಿ ಆಹಾರ) ಯೋಜನೆಯಡಿ ಆಹಾರ ಧಾನ್ಯ ಒದಗಿಸಲು ಸಮ್ಮತಿಸಿತ್ತು. ಮೊದಮೊದಲು ಆಹಾರ ಧಾನ್ಯ ಪೂರೈಕೆ ಚೆನ್ನಾಗಿಯೇ ನಡೆದುಕೊಂಡು ಬಂದಿತು. ಆದರೆ ಅಮೆರಿಕಾದ ಅಧ್ಯಕ್ಷನಾಗಿ ಲಿಂಡನ್ ಜಾನ್ಸನ್ ಎಂಬ ತಿಕ್ಕಲು ಮನುಷ್ಯ ವಕ್ಕರಿಸಿದ ನಂತರ ಈ ಆಹಾರ ಬಾಂಧವ್ಯ ಕಗ್ಗಂಟಾಗುತ್ತಾ ಬಂತು. ಭಾರತ ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಅನ್ನೋ ಅಭಿಪ್ರಾಯ ಹೊಂದಿದ್ದ ಜಾನ್ಸನ್, ಹೊಸದಾಗಿ ಉದಯಿಸಿದ್ದ ಭಾರತ ಮತ್ತು ಪಾಕಿಸ್ತಾನಗಳ ವಿಚಾರದಲ್ಲಿ ಸತಾಯಿಸುವ ನೀತಿ ಅನುಸರಿಸತೊಡಗಿದ. ಅವನ ಆ ಗೊಂದಲಮಯ ಆಹಾರ ರಾಜಕಾರಣದಿಂದ ಅವನದೇ ಅಮೆರಿಕನ್ ಅಧಿಕಾರಿಗಳು ಕಂಗಾಲಾಗಿ ಹೋದರು. ಭಾರತದತ್ತ ಬರಬೇಕಿರುವ ಆಹಾರಧಾನ್ಯವನ್ನೊತ್ತ ಹಡಗುಗಳು, ಹೊರಡಬೇಕೊ ಬೇಡವೋ ಅಂತ ಕೊನೇ ಗಳಿಗೆಯವರಿಗೆ ತನ್ನ ಅಧಿಕಾರಿಗಳಿಗೆ ನಿರ್ದೇಶನವನ್ನೇ ಆತ ನೀಡುತ್ತಿರಲಿಲ್ಲ. ಅವರೆಲ್ಲ ಕಾದು, ಸುಸ್ತಾಗಿ ಕೇಳಿದರೆ, “ಆ ವಿಚಾರ ನಾನು ನೋಡ್ಕೋತೀನಿ ಬಿಡಿ” ಎಂದು ಹೇಳುತ್ತಿದ್ದನಂತೆ. ಸ್ವತಃ ಅವನೇ ಸನ್ನಿವೇಶವನ್ನು ಪರಿಶೀಲಿಸಿ, ಪರೀಕ್ಷಿಸಿ ಕೊನೇ ಘಳಿಗೆಯಲ್ಲಿ ಅಪ್ಪಣೆ ಕೊಡುತ್ತಿದ್ದ. ಆಗ ಭಾರತದಲ್ಲಿ ಅಮೆರಿಕಾದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ಚೆಸ್ಟರ್ ಬೊವೆಲ್ ಎಂಬಾತ ಅದನ್ನು ನೇರವಾಗಿ ಬಾಯಿಗೆ ಬಂದುಬೀಳುವ ಆಹಾರ ಧಾನ್ಯ ಎಂದು ಲೇವಡಿ ಮಾಡಿದ್ದೂ ಉಂಟು. ಎಷ್ಟೋ ಸಲ ಜಾನ್ಸನ್ ಆಣತಿಯನ್ನೇ ಕೊಡುತ್ತಿರಲಿಲ್ಲ. ಆಗ ದಾಸ್ತಾನು ಗೋದಾಮಿನಿಂದ ಆಚೆ ಬರುತ್ತಲೇ ಇರಲಿಲ್ಲ.

“ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗಲೇ ದೇಶಕ್ಕೆ ಎದುರಾಗಲಿರುವ ಆಹಾರದ ಕೊರತೆಯ ವಾಸನೆ ಮೂಗಿಗೆ ಬಡಿದಿತ್ತು. ಹಾಗಾಗಿ ಅವರು ತಮ್ಮ ಕೃಷಿ ಮಂತ್ರಿ ಸಿ. ಸುಬ್ರಹ್ಮಣ್ಯನ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿ, ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವಂತೆ ಹೇಳಿದ್ದರು. ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಅವರಿಂದ ಮೊಳಗಿದ್ದು ಕೂಡಾ, ದೇಶದಲ್ಲಿ ಆಹಾರ ಧಾನ್ಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಹಸಿವನ್ನು ನೀಗಿಸುವ ಮತ್ತು ಆಹಾರ ಸ್ವಾವಲಂಬನೆಯನ್ನು ದಕ್ಕಿಸುವ ಸಲುವಾಗಿ.

ಇದನ್ನು ಓದಿದ್ದೀರಾ?: ‘ಬಿಜೆಪಿಗೆ ಮತ ಹಾಕದಿದ್ದರೆ ರಾಜ್ಯಕ್ಕೆ ಮೋದಿ ಆಶೀರ್ವಾದ ಸಿಗುವುದಿಲ್ಲ’ ಎಂಬ ಅರ್ಥ ಇದೇನಾ? ಅಕ್ಕಿ ಕಡಿತಕ್ಕೆ ಕಾಂಗ್ರೆಸ್ ಆಕ್ರೋಶ

“ಆದರೆ ಅದಕ್ಕೆಲ್ಲ ಸ್ಪಷ್ಟ ರೂಪುರೇಷೆ ಸಿಕ್ಕಿದ್ದು ಇಂದಿರಾ ಗಾಂಧಿಯವರು ಪ್ರಧಾನಿಯಾದ ನಂತರ. ಅವರು ಪ್ರಧಾನಿಯಾದ ತರುವಾಯ ಮೊದಲ ಬಾರಿಗೆ 1966ರ ಮಾರ್ಚ್‌ನಲ್ಲಿ ಅಮೆರಿಕಾಕ್ಕೆ ಭೇಟಿ ನೀಡಿದಾಗ, ಅಧ್ಯಕ್ಷ ಲಿಂಡನ್ ಜಾನ್ಸನ್ ಬಳಿ ಮೊದಲು ಪ್ರಸ್ತಾಪಿಸಿದ್ದೆ ಆಹಾರ ಪೂರೈಕೆ ವ್ಯವಸ್ಥೆಯ ಸರಳೀಕರಣದ ಬಗ್ಗೆ. ಆದರೂ ಆತ ಸುಧಾರಿಸಲೇ ಇಲ್ಲ. ಅವನ ಉಪಟಳದ ವಿರುದ್ಧ ತಿರುಗಿಬಿದ್ದ ಇಂದಿರಾಗಾಂಧಿ, ದೇಶದ ಸ್ವಾಭಿಮಾನವನ್ನು ಅಮೆರಿಕಾದ ಮುಂದೆ ಅಡವಿಡಲು ಇಷ್ಟಪಡಲಿಲ್ಲ. ಅನ್ನಕ್ಕಾಗಿ ಅಂಗಲಾಚುವ ಬದಲು, ಭಾರತಕ್ಕೂ ಒಂದು ಜಾಗತಿಕ ಅಸ್ಮಿತೆಯಿದೆ ಎಂಬುದನ್ನು ತೋರಿಸುವ ಸಲುವಾಗಿ ವಿಯೆಟ್ನಾಂ ಜನರ ಮೇಲೆ ಅಮೆರಿಕಾದ ಹಸ್ತಕ್ಷೇಪವನ್ನು ಪ್ರತಿಭಟಿಸಿ “ಬಂಡವಾಳಶಾಹಿ ಅತಿರೇಕ”ವನ್ನು ನಿಲ್ಲಿಸಬೇಕೆಂಬ ಘೋಷಣೆಗೆ ಸಹಿ ಹಾಕಿ ಜಾನ್ಸನ್‌ಗೆ ತಿರುಗೇಟು ನೀಡಿದರು. ಇದು ಜಾನ್ಸನ್‌ನನ್ನು ರೊಚ್ಚಿಗೆಬ್ಬಿಸಿತು. ಆತ ಭಾರತಕ್ಕೆ ವಿಳಂಬವಾಗಿಯಾದರೂ ಸರಬರಾಜು ಆಗುತ್ತಿದ್ದ ಆಹಾರ ಪೂರೈಕೆಯನ್ನು ಸಂಪೂರ್ಣ ನಿಲ್ಲಿಸಿದ!

“ಆಗಲೇ ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರನ್ನು ಕರೆಸಿಕೊಂಡ ಇಂದಿರಾಗಾಂಧಿಯವರು ಆಹಾರ ಸ್ವಾವಲಂಬನೆಯ ಹಸಿರು ಕ್ರಾಂತಿಗೆ ಯೋಜನೆ ರೂಪಿಸಿದರು. ದೇಶದ ಹಸಿವು ನೀಗಿಸುವುದು ಮಾತ್ರವಲ್ಲದೆ, ಅಮೆರಿಕಾ ಎಂಬ ಬಂಡವಾಳಶಾಹಿ ದೇಶದ ಮುಂದೆ ದಿಟ್ಟವಾಗಿ ತಲೆಯೆತ್ತಿ ನಿಲ್ಲುವ ದೇಶಪ್ರೇಮದ ಹೊಣೆ, ಕೊನೆಗೂ ಹೆಗಲೇರಿದ್ದ ನಮ್ಮ ರೈತರನ್ನು. ಹಸಿರು ಕ್ರಾಂತಿ ಯೋಜನೆಗೆ ರೈತರು ಸ್ಪಂದಿಸದೆ ಹೋಗಿದ್ದರೆ ದೇಶದ ಹಸಿವು ನಿಯಂತ್ರಣಕ್ಕೆ ನಿಲುಕದಷ್ಟು ಉಲ್ಬಣಿಸುತ್ತಿತ್ತು.

“ಆಹಾರ ಧಾನ್ಯಗಳ ಇಳುವರಿ ಹೆಚ್ಚಿಸಲು, ಸರ್ಕಾರ ರೈತನ ಮನೆ ಬಾಗಿಲಿಗೇ ಆಧುನಿಕ ಕೃಷಿ ವಿಧಾನ, ರಸಗೊಬ್ಬರಗಳನ್ನು ತಲುಪಿಸಿತು. ಅವರಿಗೆ ಆರ್ಥಿಕ ಸಾಮರ್ಥ್ಯ ತುಂಬಲು ಸಹಕಾರಿ ಸಂಘಸಂಸ್ಥೆಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ರೈತರು ಕೇಳದಿದ್ದರೂ ಸಾಲ ನೀಡಿದರು. ಕೃಷಿ ಇಲಾಖೆಯಿಂದ ರೈತರ ಫಸಲುಗಳ ಸಮೀಕ್ಷೆ, ರೋಗಗಳ ತಲಾಷು, ಸೂಕ್ತ ಔಷಧೋಪಚಾರಗಳು ಎಲ್ಲವೂ ಬಂದು ತಲುಪಿದವು. ಸರ್ಕಾರ ನಿರೀಕ್ಷಿಸಿದಂತೆ ಆಹಾರದ ಉತ್ಪಾದನೆ ಹೆಚ್ಚಾಗುತ್ತಾ ಬಂತು.

ಇದನ್ನು ಓದಿದ್ದೀರಾ?: ಕರ್ನಾಟಕದ ನೆಮ್ಮದಿಯ ನಾಳೆಗಳಿಗಾಗಿ ಬೇಕಿವೆ ಗ್ಯಾರಂಟಿಗಳು

“1967 ರಿಂದ 1971 ರ ಅಲ್ಪ ಅವಧಿಯಲ್ಲಿ ನಮ್ಮ ಆಹಾರ ಉತ್ಪಾದನಾ ಸಾಮರ್ಥ್ಯ ಶೇ.37ರಷ್ಟು ಹೆಚ್ಚಾಯ್ತು. 1966ರಲ್ಲಿ ಹೊರ ದೇಶದಿಂದ 10.3 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಮ್ಮ ದೇಶ 1970ರ ಹೊತ್ತಿಗೆ ಈ ಆಮದಿನ ಪ್ರಮಾಣವನ್ನು 3.6 ಮಿಲಿಯನ್ ಟನ್‌ಗೆ ಇಳಿಸಿಕೊಂಡಿತ್ತು. ಅದೇ ಅವಧಿಯಲ್ಲಿ ಆಹಾರಧಾನ್ಯಗಳ ಲಭ್ಯತೆಯ ಪ್ರಮಾಣ 73.5 ಮಿಲಿಯನ್ ಟನ್‌ನಿಂದ 99.5 ಮಿಲಿಯನ್ ಟನ್‌ಗೆ ಏರಿಕೆಯಾಯ್ತು. ಎಂಬತ್ತರ ದಶಕದ ವೇಳೆಗಾಗಲೆ ನಮ್ಮ ಹಸಿವನ್ನು ನೀಗಿಸಿಕೊಂಡು 30 ಮಿಲಿಯನ್ ಟನ್ ಧಾನ್ಯಗಳನ್ನು ದಾಸ್ತಾನು ಇಟ್ಟುಕೊಳ್ಳುವ ಸಾಮರ್ಥ್ಯವಲ್ಲದೆ ಹೊರ ದೇಶಗಳಿಗೆ ರಫ್ತು ಮಾಡುವಷ್ಟು ಶಕ್ತಿಯೂ ನಮ್ಮ ದೇಶಕ್ಕೆ ಲಭಿಸಿತ್ತು. ರೈತರೆಡೆಗೆ ಸರ್ಕಾರದ ಇಷ್ಟೆಲ್ಲ ನಿರ್ಲಕ್ಷ್ಯದ ನಡುವೆಯೂ ಇವತ್ತು ನಮ್ಮ ದೇಶದ ಅನ್ನದಾತ 250 ಮಿಲಿಯನ್ ಟನ್ ಆಹಾರದ ಧಾನ್ಯಗಳ ಉತ್ಪಾದನೆ ಮಾಡುತ್ತಿದ್ದಾನೆ…”

ಇವತ್ತು ಅನ್ನಭಾಗ್ಯದ ಯೋಜನೆಗೆ ಅಕ್ಕಿಯನ್ನು ನಿರಾಕರಿಸುತ್ತಿರುವ ನಮ್ಮದೇ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯನ್ನೇ ಅವತ್ತು ಅಮೆರಿಕಾದ ಲಿಂಡೆನ್ ಜಾನ್ಸನ್ ತೋರಿದ್ದ. ದೇಶದ ಸ್ವಾಭಿಮಾನವನ್ನು ಕೆಣಕಿದ್ದ. ಇಂದಿರಾಗಾಂಧಿಯ ಕನಸಿನಂತೆ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಈ ನೆಲದ ರೈತ ಆ ದುರಹಂಕಾರಿಗೆ ತಕ್ಕ ಉತ್ತರ ಕೊಟ್ಟಿದ್ದ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ, ಹಳೆಯದೆಲ್ಲ ಮತ್ತೆ ನೆನಪಾಗುತ್ತಿದೆ. History repeats itself ಅಂತಾರಲ್ಲ, ಅದು ಇದೇ ಇರಬಹುದೇನೋ…

WhatsApp Image 2023 06 15 at 2.47.13 PM
ಗಿರೀಶ್ ತಾಳಿಕಟ್ಟೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X