ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ 6.45ರ ಸುಮಾರಿಗೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದ ನಿತೀಶ್(18), ನಿತಿನ್(17) ಮತ್ತು ವೈಭವ್(16) ಮೃತ ವಿದ್ಯಾರ್ಥಿಗಳು. ನಿತೀಶ್, ನಿತಿನ್ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವೈಭವ್ ಗುಡ್ ಶೆಫರ್ಡ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ.
ಈ ಮೂವರು ವಿದ್ಯಾರ್ಥಿಗಳು ಒಂದೇ ಊರಿನವರಾಗಿದ್ದು, ಬುಧವಾರ ಸಂಜೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆವಲಗುರ್ಕಿಗೆ ತೆರಳುವ ಗೇರಹಳ್ಳಿ ಬಳಿ ರಸ್ತೆಯಲ್ಲಿ ಜೆಸಿಬಿಯೊಂದು ಪಂಕ್ಚರ್ ಆಗಿ ನಿಂತಿದ್ದು, ಜೆಸಿಬಿ ಚಕ್ರವನ್ನು ತೆಗೆದುಕೊಂಡು ಟ್ರ್ಯಾಕ್ಟರ್ ಬಂದಿತ್ತು. ಈ ವೇಳೆ ರಸ್ತೆಯಲ್ಲೇ ನಿಂತಿದ್ದ ಟ್ರ್ಯಾಕ್ಟರ್ ಯಾವುದೇ ಇಂಡಿಕೇಟರ್ ಹಾಕಿರಲಿಲ್ಲ. ಕತ್ತಲಾಗಿದ್ದ ಹಿನ್ನೆಲೆ ಟ್ರ್ಯಾಕ್ಟರ್ ನಿಲ್ಲಿಸಿರುವುದು ಕಾಣಿಸುತ್ತಿರಲಿಲ್ಲ. ಇದೇ ವೇಳೆ ಬೈಕ್‌ನಲ್ಲಿ ಬಂದ ವಿದ್ಯಾರ್ಥಿಗಳು ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದ್ದು, ಧಾರುಣ ಅಂತ್ಯ ಕಂಡಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.