ಇತ್ತೀಚಿನ ದಿನಗಳಲ್ಲಿ, ಬೆಂಗಳೂರಿನ ಬೀದಿ ಬದಿ ಮತ್ತು ತಳ್ಳುಗಾಡಿ ತರಕಾರಿ ವ್ಯಾಪಾರಿಗಳು ಟೊಮೆಟೊ ಮಾರಾಟದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ಒಂದಷ್ಟು ದುಡ್ಡು ನೋಡಲು ಟೊಮೆಟೊ ಬೆಲೆ ನೆರವಾಗುತ್ತಿದೆ ಎಂಬು ಅವರು ಭಾವಿಸಿದ್ದಾರೆ. ಕಳೆದ ವಾರ 110ರಿಂದ 120 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ, ಈ ವಾರ 140 ರೂ.ಗೆ ಏರಿಕೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗಿದೆ ಎಂದು ತರಕಾರಿ ಮಾರಾಟಗಾರರು ಮತ್ತು ಕೃಷಿ ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಿದ್ದಾರೆ.
ನಿರಂತರ ಮಳೆಯಿಂದಾಗಿ ಮೆಟೊಮೆ ಹೂವು ಮತ್ತು ಕಾಯಿಗಳ ಉದುರುತ್ತಿವೆ. ಜೊತೆಗೆ, ಕೊಯ್ಲು ಕೂಡ ಕಷ್ಟಕರವಾಗಿದೆ. ಈಗಾಗಲೇ ಟೊಮೆಟೊ ಬೇಡಿಕೆ ತಕ್ಕಂತೆ ಪೂರೈಕೆ ಇಲ್ಲವಾಗಿದ್ದು, ಈಗ ಪೂರೈಕೆ ಮತ್ತಷ್ಟು ಕಡಿಮೆಯಾಗಿದೆ. ಪರಿಣಾಮವಾಗಿ ಟೊಮೆಟೊ ಬೆಲೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
“ಕಳೆದ ಒಂದು ತಿಂಗಳಿನಿಂದ ಕೋಲಾರ ಎಪಿಎಂಸಿಯಲ್ಲಿ 15 ಕೆ.ಜಿ ಟೊಮೆಟೊ ಬಾಕ್ಸ್ 2,000 ರೂ.ಗೆ ಮಾರಾಟವಾಗುತ್ತಿತ್ತು. ಕಳೆದ ವಾರ, ಬೆಲೆ ಇಳಿಕೆಯಾಗಿ, 1,400-1,900 ರೂಗೆ ಮಾರಾಟವಾಗಿತ್ತು. ಇದೀಗ, ಮತ್ತೆ 2,100 ರೂ.ಗೆ ಏರಿಕೆಯಾಗಿದೆ” ಎಂದು ಟೊಮೆಟೊ ಮಂಡಿಯಲ್ಲಿ ಹರಾಜು ನಡೆಸುವ ಹರೀಶ್ ಹೇಳಿದ್ದಾರೆ.
“ಬೆಂಗಳೂರು ಎಪಿಎಂಸಿಗೆ ಬೆಂಗಳೂರು ಗ್ರಾಮಾಂತರದಿಂದ ಟೊಮೆಟೊ ಬರುತ್ತಿದ್ದು, ಪ್ರತಿ ಕೆಜಿ ಟೊಮೆಟೊ ದರ 84-92 ರೂ. ಇದೆ. ಕೋಲಾರದಿಂದ ಬರುತ್ತಿರುವ ಟೊಮೇಟೊ ಬೆಲೆ ಜಾಸ್ತಿಯಾಗಿದೆ. ಆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ. ಬೆಂಗಳೂರು ನಗರಕ್ಕೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕುಣಿಗಲ್, ರಾಮನಗರ, ಆನೇಕಲ್ ಮತ್ತು ಕನಕಪುರದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. ಈ ಎಲ್ಲ ಕಡೆ ಎಡಬಿಡದೆ ಮಳೆಯಾಗುತ್ತಿದ್ದು, ಕಟಾವು ಕಷ್ಟಕರವಾಗಿದೆ. ಜೊತೆಗೆ, ಸಾಗಾಣಿಕೆಯೂ ವಿಳಂಬವಾಗುತ್ತಿದೆ” ಎಂದು ಬಿನ್ನಿಪೇಟೆ ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಮಾರುಕಟ್ಟೆ ದರದಲ್ಲಿ ಟೊಮೆಟೊಗಳನ್ನು ಖರೀದಿಸಲು ಮತ್ತು ಬೇಡಿಕೆಯನ್ನು ನಿರ್ವಹಿಸಲು ಉತ್ತರ ಭಾರತದ ನಗರಗಳಿಗೆ ಟೊಮೆಟೊ ರಫ್ತು ಮಾಡಲು ಕೇಂದ್ರ ಸರ್ಕಾರವು ಆದೇಶಿಸಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ತಿಳಿಸಿವೆ.
“ಟೊಮೆಟೊಗಳನ್ನು ದಕ್ಷಿಣದ ರಾಜ್ಯಗಳಿಂದ ಖರೀದಿಸಿದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಿಂದ 30% ರಿಯಾಯಿತಿಯಲ್ಲಿ ಉತ್ತರದ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೆಲೆ ಏರಿಳಿತವನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ತಿಳಿದುಬಂದಿದೆ.