ದೇವಾಲಯದ ಬೀಗ ಮುರಿದು ದೇವರ ಪಂಚಲೋಹದ ವಿಗ್ರಹಗಳು ಹಾಗೂ ವಸ್ತ್ರಾಭರಣಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬಾಗೇಪಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಲಘು ಮದ್ದೇಪಲ್ಲಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಘಟನೆ ನಡೆದಿದೆ. ದೇವಾಲಯದ ಪೂಜಾರಿ ವೆಂಕಟರವಣಪ್ಪ ಎಂದಿನಂತೆ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲು ತೆರಳಿದಾಗ ಕಳ್ಳತನದ ಮಾಹಿತಿ ಬಹಿರಂಗವಾಗಿದೆ.

ಕಳ್ಳರು ದೇವಾಲಯದ ಬಾಗಿಲಿನ ಬೀಗವನ್ನು ಮುರಿದು ದೇವಾಲಯದಲ್ಲಿದ್ದ ದೇವಿಯ ಪಂಚಲೋಹ ವಿಗ್ರಹ, ಶಕ್ತಿ ದೇವತೆಯ 2 ವಿಗ್ರಹಗಳು, 2 ಪ್ರಭಾವಳಿಗಳು, ದೇವಿಯ ಸೀರೆ ಮತ್ತು ರವಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.
ಆದರೆ 2 ತಾಳಿ ಮತ್ತು 2 ನಾಗರ ಹೆಡೆಗಳನ್ನು ಮಾತ್ರ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಗ್ಗೆ ಬಾಗಿಲು ತೆರೆಯಲು ಬಂದ ಪೂಜಾರಿ ಗಾಬರಿಗೊಂಡಿದ್ದು, ಕೂಡಲೇ ಗ್ರಾಮಸ್ಥರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬಾಗೇಪಲ್ಲಿ | ವಕೀಲ ವೃತ್ತಿ ಜಗತ್ತಿನಲ್ಲಿಯೇ ಶ್ರೇಷ್ಠ ವೃತ್ತಿ; ನ್ಯಾಯಾಧೀಶೆ ಎಂ.ಭಾರತಿ
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಆರ್. ವರ್ಣಿ ಅವರ ನೇತೃತ್ವದಲ್ಲಿ ಪಿಎಸ್ ಐ ನಾಗಮ್ಮ ಮತ್ತು ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡಗಳನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.