ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ಮುಖಂಡರು ಬೀದರ್ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲ, ಮುಖ್ಯಮಂತ್ರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼ2023ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಇದೀಗ ಬೇಡಿಕೆಯನ್ನು ಈಡೇರಿಸಲು ರಾಜ ಸರ್ಕಾರ ಮುಂದಾಗಬೇಕು. ಒಳ ಮೀಸಲಾತಿ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ಪ್ರಕ್ರಿಯೆ ನಡೆಸಬಾರದುʼ ಎಂದು ಒತ್ತಾಯಿಸಿದರು.
ʼಪರಿಶಿಷ್ಟ ಜಾತಿಯಲ್ಲಿ ಉಪ ವರ್ಗೀಕರಣ ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಸಂವಿಧಾನ ಪರಿಚ್ಛೇದದ ತಿದ್ದುಪಡಿ ಅಗತ್ಯವಿಲ್ಲ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ 1 ರಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ವಿಳಂಬ ಧೋರಣೆಗೆ ಆಸ್ಪದ ನೀಡದೇ ಒಳ ಮೀಸಲಾತಿ ಜಾರಿ ಮಾಡಬೇಕುʼ ಎಂದು ಆಗ್ರಹಿಸಿದರು.
ʼಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್.ಸಿ. ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳದೇ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ₹1,400 ಕೋಟಿ ಪಾವತಿಸಿಲ್ಲ: ಸಚಿವ ಈಶ್ವರ ಖಂಡ್ರೆ
ಪ್ರತಿಭಟನೆಯಲ್ಲಿ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಧ್ಯಕ್ಷರಾದ ಫರ್ನಾಂಡಿಸ್ ಹಿಪ್ಪಳಗಾಂವ, ರಾಜು ಕಡ್ಯಾಳ, ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷರಾದ ಕಮಲಾಕರ.ಎಲ್.ಹೆಗಡೆ, ಜಾಪೇಟ್ ಕಡ್ಯಾಳ್, ಸ್ವಾಮಿದಾಸ ಮೇಘಾ, ದತ್ತಾತ್ರಿ ಜ್ಯೋತಿ, ಸುಧಾಕರ ಕೊಳ್ಳೂರ, ಸುಧಾಕರ ಸೂರ್ಯವಂಶಿ, ಶಿವಣ್ಣಾ ಹಿಪ್ಪಳಗಾಂವ, ಪೀಟರ್ ಚಿಟಗುಪ್ಪಾ, ರವಿ ನಿಜಾಂಪೂರೆ, ಪರಮೇಶ್ವರ ಕಾಳಮಂದರಗಿ, ಜಯಶೀಲ್ ಕಲವಾಡೆ, ವಿಜಯಕುಮಾರ ಸೂರ್ಯವಂಶಿ,ವೀರಶೇಟ್ಟಿ , ಮನೋಹರ, ರಾಜು ಸಾಂಗ್ಲೆ, ಸಚೀನ ಅಂಬೇಸಿಂಗೆ, ಗೋರಖ ನಿಂಬೂರ, ಪೀಟರ್ ಶ್ರೀಮಂಡಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.