ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ 40,000 ಕೋಟಿ ರೂ. ಹಗರಣ ನಡೆಸಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ. ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಧಾರವಾಡ ಕಾಂಗ್ರೆಸ್ ಆಗ್ರಹಿಸಿದೆ.
ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಈಶ್ವರ ಶಿವಳ್ಳಿ, “ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಬಿಜೆಪಿ ಸರ್ಕಾರ ಕೋವಿಡ್ ಹೆಸರಿನಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದಾರೆ. ಆ ಅರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರವಾಗಿ ಪರಿಗಣಿಸಬೇಕು. ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಜನತೆಗೆ ನೈಜ್ಯ ಚಿತ್ರಣವನ್ನು ತೋರಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ಹಿಂದಿನ ಬಿಜೆಪಿ ಸರ್ಕಾರದ ಸಚಿವ, ಶಾಸಕ ಹಾಗೂ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಅರವಿಂದ ಏಗನಗೌಡರ ಮಾತನಾಡಿ, “ಬಿಜೆಪಿ ಸರ್ಕಾರವು ಜನರ ಜೀವನದ ಜೊತೆಗೆ ಆಟವಾಡಿದೆ. ಹೆಣಗಳ ಮೇಲೆ ರಾಜಕೀಯ ಮಾಡಿ, ಕೋಟಿ ಕೋಟಿ ಹಣ ಕೊಳ್ಳೆ ಹೊಡೆದಿದೆ. ಈ ಬಗ್ಗೆ ಸಿದ್ಧರಾಮಯ್ಯನವರು ಸೂಕ್ತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಕಾಶ ದೊಡವಾಡ, ಪ್ರವೀಣ ಅದರಗುಂಚಿ, ಉಳವಪ್ಪ ಚಂದರಗಿ, ಜಿ.ಬಿ.ಕಟ್ಟಿಮನಿ, ಪರಮೇಶ್ವರ ಕಾಳೆ, ಎ ಡಿ ಮಾದರ, ಸಲೀಮ್ ಮಾಳಗಿ ಇದ್ದರು.