ಗ್ರಾಮೀಣ ಪ್ರದೇಶದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಗ್ರಾಮೀಣ ಕ್ರೀಡೆ ಹಾಗೂ ಕಲೆಗಳು ಆಧುನಿಕತೆಯ ಭರಾಟೆಗೆ ಸೊರಗಿ ಹೋಗುತ್ತಿದ್ದು, ಯುವಕರಲ್ಲಿನ ನಿರುತ್ಸಾಹ ಹಾಗೂ ರಾಜಕೀಯ ಗುಂಪುಗಾರಿಕೆ ಗ್ರಾಮೀಣ ಸಂಸ್ಕೃತಿಯನ್ನು ಮಂಕಾಗಿಸುತ್ತಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಯುವ ಸಬಲೀಕರಣ ಇಲಾಖೆ, ಮಲ್ಲಸಂದ್ರ ವಾಲ್ಮೀಕಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ ಹಾಗೂ ದೇವರೆಡ್ಡಿಪಲ್ಲಿ ಜನತಾ ಕ್ರೀಡಾ ಯುವಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವೇ ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಪ್ರಸಿದ್ದಿಯಾಗಿದ್ದ ಗ್ರಾಮೀಣ ಕ್ರೀಡೆಗಳು, ನಾಟಕಗಳು ಗ್ರಾಮಗಳಲ್ಲಿ ಸಂಭ್ರಮದ ಸನ್ನಿವೇಶವನ್ನು ಸೃಷ್ಠಿಸುತ್ತಿದ್ದು. ಗ್ರಾಮಸ್ಥರೆಲ್ಲಾ ಒಂದೇ ಕಡೆ ಸೇರಿ ಸಂಭ್ರಮಪಡುತ್ತಿದ್ದರು. ದಿನವಿಡೀ ದುಡಿಮೆಯ ದಣಿವನ್ನು ನಿವಾರಿಸಿಕೊಳ್ಳುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಆಧುನಿಕತೆ ಗ್ರಾಮೀಣ ಸಂಸ್ಕೃತಿಯನ್ನು ಮರೆಯಾಗುವಂತೆ ಮಾಡುತ್ತಿದೆ. ಯುವ ಜನತೆ ಬೇರೊಂದು ದಿಕ್ಕಿನಲ್ಲಿ ಸಾಗುತಿದ್ದು ಗ್ರಾಮೀಣ ಸಂಸ್ಕೃತಿ, ಕಲೆಗಳ ಬಗ್ಗೆ ಆಸಕ್ತಿಯನ್ನು ತೋರುತ್ತಿಲ್ಲ. ಇಂದು ನಡೆದ ಗ್ರಾಮೀಣ ಕ್ರೀಡಾ ಕೂಟದಲ್ಲಿ ಗ್ರಾಮಸ್ಥರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದ್ದು ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ಗ್ರಾಮದ ಗತವೈಭವವನ್ನು ಮರುಕಳಿಸಿದಂತೆ ಮಾಡಿದೆ ಎಂದು ಹೊಗಳಿದರು.

ಮಲ್ಲಸಂದ್ರ ವಾಲ್ಮೀಕಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ ಅಧ್ಯಕ್ಷ ಎಂ.ಸಿ.ಅಶ್ವತ್ಥಪ್ಪ ಮಾತನಾಡಿ, ದೇವರೆಡ್ಡಿಪಲ್ಲಿ ಒಂದು ಮಾದರಿ ಗ್ರಾಮ. ಇಲ್ಲಿನ ಜನತಾ ಯುವಕ ಸಂಘ ತನ್ನ ಚಟುವಟಿಕೆಗಳಿಂದ ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿದಂತಹ ಉತ್ತಮ ಸಂಘ. ಗ್ರಾಮದ ಯುವಕರು ಕಲೆ ಮತ್ತು ಕ್ರೀಡೆಗೆ ತೋರುವ ಆಸಕ್ತಿ ಶ್ಲಾಘನೀಯವಾದುದು. ಸೇವಾ ಕಾರ್ಯಕ್ರಮಗಳಿಗೂ ಗ್ರಾಮಸ್ಥರು ನೀಡುವ ಸಹಕಾರ ಅಭಿನಂದನೀಯವಾದುದು ಎಂದರು.
ಗ್ರಾಮದಲ್ಲಿ ಸಂಭ್ರಮ ಮೂಡಿಸಿದ ಗ್ರಾಮಿಣ ಕ್ರೀಡಾಕೂಟ : ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟ ಗ್ರಾಮದಲ್ಲಿ ಸಡಗರದ ವಾತಾವರಣವನ್ನು ನಿರ್ಮಿಸಿತ್ತು. ರಂಗೋಲಿ ಸ್ಪರ್ಧೆ, ಗೋಣಿ ಚೀಲದ ಓಟ, ಹಗ್ಗಾ-ಜಗ್ಗಾಟ, ಲೆಮನ್ ಆನ್ ದಿ ಸ್ಪೂನ್, ಮಡಿಕೆ ಹೊಡೆಯುವುದು, ಮ್ಯೂಸಿಕಲ್ ಚೇರ್, ಮೂರು ಕಾಲಿನ ಓಟ ಮತ್ತಿತರ ಸ್ಪರ್ಧೆಗಳಲ್ಲಿ ಭಾಗವಹಿಸಲು ತೀವ್ರ ಪೈಪೋಟಿ ಉಂಟಾಗಿತ್ತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ವಯಸ್ಸಿನ ಬೇಧ-ಭಾವವಿಲ್ಲದೆ ಕ್ರೀಡೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಿಜೇತರಿಗೆ ಪ್ರಶಸ್ತಿ ಹಾಗು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಗ್ರಾಪಂ ಸದಸ್ಯರಾದ ಡಿ.ಎನ್.ಸುಧಾಕರರೆಡ್ಡಿ, ನಾಗಮಣಿ ಶಿವಪ್ಪ, ಶಿಕ್ಷಕ ಲಕ್ಷ್ಮೀ ನರಸಿಂಹಪ್ಪ, ಪ್ರಗತಿ ಗ್ರಾಮೀಣ ಬ್ಯಾಂಕ್ ಶ್ರೀನಿವಾಸ್, ಡಿ.ಎನ್.ಮದ್ದಿಲೇಟಿರೆಡ್ಡಿ, ಶಿವಶಕ್ತಿ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಡಿ.ಎನ್.ನಾಗರಾಜ, ಸತೀಶ್, ನರಸಿಂಹರೆಡ್ಡಿ, ಡಿ.ಎನ್.ನರಸರಾಮರೆಡ್ಡಿ , ಡಿ.ಪಿ.ಲಕ್ಷ್ಮೀಪತಿ ರೆಡ್ಡಿ, ಮಂಜುನಾಥ, ಚೌಡರೆಡ್ಡಿ, ಜಿ. ಆನಂದ, ಮುನಿರಾಜು, ನವನೀತ್, ಜಿ.ಶಂಕರಪ್ಪ, ನಂದೀಶ, ರಘು, ಕೃಷ್ಣಾರೆಡ್ಡಿ, ಮುಂತಾದವರು ಉಪಸ್ಥಿತರಿದ್ದರು.