ಗ್ರಾಮೀಣ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯ ಹೃದಯವಿದ್ರಾವಕ ಘಟನೆಗಳನ್ನು ಬಹುತೇಕ ಹಳ್ಳಿಗಳಲ್ಲಿ ಕಾಣಬಹುದು. ಅಂತಹದ್ದೇ ಒಂದು ದುಃಸ್ಥಿತಿಯಲ್ಲಿರುವ ಆಸ್ಪತ್ರೆಯ ನಿಜಕಥೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಸೋಮನಾಳ ಅಡವಿ ಸೋಮನಾಳ ಪಿಎಚ್‌ಸಿಯದ್ದಾಗಿದೆ. ಸ್ಥಳೀಯ ಗ್ರಾಮಗಳ ಜನರ ಆರೋಗ್ಯ ಸೇವೆಗೆ ಕತ್ತಲು ಕವಿದಿದ್ದು, ರೋಗಿಗಳು ಆತಂಕದಲ್ಲಿಯೇ ದಿನದೂಡುವಂತಾಗಿದೆ.
ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಹಸಿರು ಬೆಟ್ಟಗಳ ನಡುವೆ ಹರಡಿರುವ ಚೊಮನಬಾವಿ, ಅಡವಿ ಉಲಗಬಾಳ, ಅಡವಿ ಹುಲಗಬಾಳ ತಾಂಡಾ, ಕ್ಯಾತನ ದೋಣಿ, ಕ್ಯಾತನಾಡೋಣಿ ತಾಂಡಾ ಮತ್ತು ಡೊಂಕುಮಡು ಮುಂತಾದ ಹಳ್ಳಿಗಳು ಶಾಂತಿಯುತವಾಗಿ ನೆಲೆಸಿವೆ. ಆದರೆ ಅಂತಹ ಶಾಂತತೆಯ ಹಿಂದೆ ಒಂದು ದುಃಖದ ಕಥೆ ಮರೆಯಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ(ಪಿಎಚ್‌ಸಿ) ನಿರ್ಲಕ್ಷ್ಯದಿಂದ ನೂರಾರು ರೋಗಿಗಳಿಗೆ ಉತ್ತಮ ಚಿಕಿತ್ಸೆ ಎಂಬುದು ಮರೀಚಿಕೆಯಾಗಿದೆ. ವರ್ಷಗಳಿಂದ ಇಲ್ಲಿನ ನೂರಾರು ಮಂದಿ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಅವರನ್ನು ಖಾಲಿ ಕೊಠಡಿಗಳು ಸ್ವಾಗತಿಸುತ್ತವೆ. ವೈದ್ಯರ ಅನುಪಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರದಿಂದ ನೀಡಿರುವ ಔಷಧಿಗಳು ಹಾಗೆಯೇ ಉಳಿದಿವೆ. ಅವುಗಳನ್ನು ಸಮರ್ಪಕವಾಗಿ ವಿತರಿಸುವ ವೈದ್ಯರೇ ಇಲ್ಲ. ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇವೆಲ್ಲವೂ ಕೇವಲ ಸಮಸ್ಯೆಯಲ್ಲ, ಇದು ಗ್ರಾಮೀಣ ಜನರ ಜೀವನದಲ್ಲಿ ನಿರಂತರವಾಗಿ ನಡೆಯುತ್ತಿರುವ ದುರಂತವೇ ಸರಿ.

ಅಡವಿ ಸೋಮನಾಳ ಪಿಎಚ್‌ಸಿಯ ಸಿಬ್ಬಂದಿ ಕೊರತೆಯು ಇಷ್ಟು ತೀವ್ರವಾಗಿದ್ದು, ಒಬ್ಬ ಅಟೆಂಡರ್ ಮೇಲೆಯೇ ಸಂಪೂರ್ಣ ಕೇಂದ್ರ ನಡೆಯುತ್ತಿದೆ. ರಕ್ತ ಪರೀಕ್ಷೆ ಮಾಡುವವರಿಲ್ಲ, ಔಷಧಗಳು ಸರಿಯಾಗಿ ಲಭ್ಯವಿಲ್ಲ, ವೈದ್ಯರು ಬರುವುದೇ ಅಪರೂಪ ಹೀಗೆ ಹೆಳುತ್ತ ಹೋದರೆ ಸಮಸ್ಯೆಗಳ ಪಟ್ಟಿಗೆ ಕೊನೆಯಿಲ್ಲದಂತಿದೆ. ಆದರೆ ಈ ಸಮಸ್ಯೆಗಳ ಹಿಂದೆ ಇರುವುದು ಮಾನವೀಯ ಕಥೆಗಳು ನೋವು, ಹತಾಶೆ ಮತ್ತು ನಿರೀಕ್ಷೆಯ ಕಥೆಗಳು.
ಡೊಂಕುಮಡು ಹಳ್ಳಿಯ ನಿಹಾರಿಕಾ ಎಂಬುವವರ ಚಿಕಿತ್ಸೆಗಾಗಿ ಅವರ ಪಾಲಕರು 6 ಕಿಲೋಮೀಟರ್ ದೂರದಿಂದ ಸೋಮನಾಳ ಆಸ್ಪತ್ರೆಗೆ ಕರೆದುಕೊಂಡುಬಂದಿದ್ದರು. ನಿಹಾರಿಕಾ 7ನೇ ತರಗತಿಯ ವಿದ್ಯಾರ್ಥಿನಿ. ಅವಳ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಚಿಕಿತ್ಸೆಯ ಅಗತ್ಯವಿತ್ತು. ಆದರೆ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರಲಿಲ್ಲ.
ನಿಹಾರಿಕಾ ಪೋಷಕರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಚಿಕಿತ್ಸೆಗೆಂದು ಮಗಳನ್ನು ಕರೆದುಕೊಂಡು ಬಂದರೆ ಇಲ್ಲಿ ವೇದ್ಯರೇ ಇಲ್ಲ. ವೈದ್ಯರ ಬಗ್ಗೆ ಕೇಳಿದರೆ, ʼಏನಾಗಿದೆ ಹೇಳಿ, ನಾವೇ ಟ್ರೀಟ್‌ಮೆಂಟ್ ಮಾಡುತ್ತೇವೆʼ ಅಂತ ಅಟೆಂಡರ್ ಉದ್ದಟತನವಾಗಿ ಮಾತನಾಡುತ್ತಾರೆ. ವೈದ್ಯರು ಯಾಕೆ ಬಂದಿಲ್ಲವೆಂದು ಕೇಳಿದರೆ, ʼನಮಗೆ ಗೊತ್ತಿಲ್ಲʼವೆಂಬ ಉತ್ತರ ಕೊಡುತ್ತಾರೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ನಾವು ಈಗ ಏನು ಮಾಡಬೇಕು? ಮಗಳ ಅರೋಗ್ಯ ನೋಡಬೇಕಾ ಅಥವಾ ವೈದ್ಯರು ಬಂದಿಲ್ಲ ಅಂತ ಕಾಯುತ್ತ ಕುಳಿಕೊಳ್ಳಬೇಕಾ? ಏನೂ ತೋಚದಂತಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಲು ನಮ್ಮ ಬಳಿ ಅಷ್ಟು ಹಣವಿಲ್ಲ, ಸರ್ಕಾರಿ ಆಸ್ಪತ್ರೆಗೆ ಬಂದರೆ ವೈದ್ಯರೇ ಇಲ್ಲ, ನಮ್ಮಂತ ಬಡವರು ಹೇಗೆ ಹುಷಾರುಮಾಡಿಕೊಳ್ಳಬೇಕು” ಎನ್ನುವ ಅವರ ಮಾತುಗಳಲ್ಲಿ ಗ್ರಾಮೀಣ ಜನರ ದೈನಂದಿನ ಹೋರಾಟದ ಧ್ವನಿ ಕೇಳುತ್ತದೆ. ದೂರದ ಹಳ್ಳಿಗಳಿಂದ ನಿರೀಕ್ಷೆಯಲ್ಲಿ ಬರುವ ರೋಗಿಗಳಿಗೆ ವೈದ್ಯರಿಲ್ಲವೆಂಬ ನಿರಾಸೆಯು ಇನ್ನಷ್ಟು ನೋವುಂಟುಮಾಡುತ್ತದೆ.
ನೀಲಮ್ಮ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮನೆಯ ಮಳಿಗೆ ಮೇಲಿಂದ ಬಿದ್ದು ಮೊಣಕೈಗೆ ಗಾಯ ಆಗಿತ್ತು. ತುಂಬಾ ನೋವಿದೆ ಅಂತ ಪಿಎಚ್‌ಸಿಗೆ ಬಂದು ಗಾಯಕ್ಕೆ ಡ್ರೆಸ್ಸಿಂಗ್ ಮಾಡೋಕೆ ಕೇಳಿದರೆ, ʼನೀವೇ ಡ್ರೆಸ್ಸಿಂಗ್ ಮಾಡಿಕೊಂಡು ಹೋಗಿʼ ಅಂತ ಉದಾಸೀನದ ಉತ್ತರ ಕೊಡ್ತರೆ, ಇದಕ್ಕಾಗಿ ನಾವು ಆಸ್ಪತ್ರೆಗೆ ಬರಬೇಕಾ? ಇದೇ ಕೆಲಸವನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಅಲ್ವಾ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
65-70 ವರ್ಷದ ವೃದ್ದೆಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾಲ್ಕು ದಿನಗಳಿಂದ ಜ್ವರ, ನೆಗಡಿ, ಕೆಮ್ಮು ಮತ್ತು ಕೈ-ಕಾಲು ನೋವಿನಿಂದ ಹೈರಾಣಾಗಿದಿನಿಪ್ಪ. ವೈದ್ಯರಿಗೆ ತೋರಿಸಿ ಆರಾಮ ಮಾಡಬೇಕು ಅಂತ ಆಸ್ಪತ್ರೆ ಬಂದರೆ ವೈದ್ಯರು ಇರಲಿಲ್ಲ. ನಮ್ಮ ಕಷ್ಟ ಯಾರು ಕೇಳುತ್ತಾರಪ್ಪ” ಎಂದು ದುಃಖಿತರಾದರು.

ಪಿಎಚ್‌ಸಿ ಸ್ಥಿತಿಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಮುದ್ದೇಬಿಹಾಳ ತಾಲೂಕು ವೈದ್ಯಾಧಿಕಾರಿ ಸತೀಶ್ ತಿವಾರಿಯವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಅಲ್ಲಿರುವವರು ವೈದ್ಯರೇ, ಅವರನ್ನು ನಮ್ಮ ಕ್ಲಿನಿಕ್‌ನಿಂದ ಅಲ್ಲಿಗೆ ಅಪಾಯಿಂಟ್ ಮಾಡಲಾಗಿದೆ. ಅವರೇ ಎಲ್ಲ ಕೆಲಸಗಳನ್ನು ಮಾಡುತ್ತೇನೆಂದು ಒಪ್ಪಿಕೊಂಡಿದ್ದಾರೆ. ಅವರು ಎಂಬಿಬಿಎಸ್ ವೈದ್ಯರೇ” ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಬಂದ ರೋಗಿಗಳಿಗೆ ಬಿಪಿ ಚೆಕ್ ಮಾಡುವ ಯಂತ್ರವೇ ಇಲ್ಲದೆ ಹೇಗೆ ಚಿಕಿತ್ಸೆ ಆರಂಭಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವೈದ್ಯಕೀಯ ಸಲಕರಣೆಗಳು ಇವೆ. ಬಿಪಿ ಚೆಕ್ ಮಾಡಬೇಕು” ಎಂದು ಹೇಳಿದರು.
ಬಳಿಕ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಯೊಟ್ಟಿಗೆ ಮಾತನಾಡಿ ಅವರನ್ನು ಕೇಳಿದಾಗ, “ಬಿಪಿ ಯಂತ್ರದ ಬ್ಯಟರಿ ಹಾಳಾಗಿದೆ ಸರ್” ಎಂದು ಹೇಳಿದರು. ಬಳಿಕ ತಾಲೂಕಾಧಿಕಾರಿ ಈ ವಿವಯವನ್ನು ನನ್ನ ಗಮನಕ್ಕೆ ಯಾಕೆ ತಂದಿಲ್ಲವೆಂದು ಕೇಳಿದ್ದು, ಮುಂದಿನ ವಾರದಲ್ಲಿ ನಾನು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸುತ್ತೇನೆಂದು ಹೇಳಿ ತೇಪೆ ಹಚ್ಚಿದರು.
ಇದು ಕೇವಲ ಒಂದು ಹಳ್ಳಿಯ ಘಟನೆಯಲ್ಲ, ಸಂಪೂರ್ಣ ವ್ಯವಸ್ಥೆಯ ವೈಫಲ್ಯವನ್ನು ತೋರುತ್ತದೆ. ಮೂಲಭೂತ ಚಿಕಿತ್ಸೆಗೂ ಸಿಬ್ಬಂದಿ ಇಲ್ಲದಿದ್ದರೆ, ಗ್ರಾಮೀಣ ಜನರು ಯಾರ ಬಳಿ ಹೋಗಬೇಕು? ನೀಲಮ್ಮ ಅವರಂತಹ ಅನೇಕರು ತಮ್ಮ ನೋವನ್ನು ಮನೆಯಲ್ಲೇ ನಿಭಾಯಿಸಬೇಕಾಗುತ್ತದೆ. ಇದರಿಂದ ಸೋಂಕು ಅಥವಾ ಇನ್ನಷ್ಟು ಸಮಸ್ಯೆಗಳು ಉಂಟಾಗುವ ಅಪಾಯವಿದೆ.
ಗ್ರಾಮೀಣ ಭಾಗದ ವಯಸ್ಸಾದವರು, ಮಕ್ಕಳು, ಮಹಿಳೆಯರು ಮತ್ತು ಪುರುಷರೆಲ್ಲರೂ ಈ ವ್ಯವಸ್ಥೆಯ ಬಲಿಪಶುಗಳೇ ಆಗಿದ್ದಾರೆ. ನಾಲ್ಕು ದಿನಗಳಿಂದ ವೈದ್ಯರಿಗಾಗಿ ಕಾಯುತ್ತಿದ್ದರೂ ಯಾರೂ ಕೇಳದಿದ್ದರೆ, ಆರೋಗ್ಯ ವ್ಯವಸ್ಥೆಯ ಉದ್ದೇಶವೇನು?
ಇದನ್ನೂ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ
ಈ ಪಿಎಚ್‌ಸಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಒಬ್ಬ ಅಟೆಂಡರ್ ಮೇಲೆಯೇ ಎಲ್ಲ ಹೊಣೆಗಾರಿಕೆಯನ್ನು ಹಾಕಿ, ಆರೋಗ್ಯ ಕೇಂದ್ರವನ್ನು ನಡೆಸಲಾಗುತ್ತಿದೆ. ಇದು ಕೇವಲ ಅಡವಿ ಸೋಮನಾಳದ ಕಥೆಯಲ್ಲ, ಇದು ಗ್ರಾಮೀಣ ಭಾರತದಲ್ಲಿ ಅನೇಕ ಪಿಎಚ್‌ಸಿಗಳಲ್ಲಿರುವ ಸಾಮಾನ್ಯ ಸ್ಥಿತಿ. ಸರ್ಕಾರದ ಯೋಜನೆಗಳು ಕಾಗದದ ಮೇಲೆ ಅಕ್ಷರಗಳಾಗಿ ಇರಬಹುದು. ಆದರೆ ವಾಸ್ತವದಲ್ಲಿ ಒಂದು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಜೀವನ ಅಪಾಯದಲ್ಲಿ ಸಿಲುಕಿದೆ.
ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಯಾವಾಗ ಕ್ರಮ ಕೈಗೊಳ್ಳಲಾಗುವುದು? ನಿಹಾರಿಕಾ, ನೀಲಮ್ಮ ಮತ್ತು ವೃದ್ಧೆಯಂತಹ ಅನೇಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಪರಿತಪಿಸುತ್ತಿದ್ದಾರೆ. ಸರ್ಕಾರ ಮತ್ತು ಸಂಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಗಮನಹರಿಸಿ, ಆಸ್ಪತ್ರಗೆ ಕವಿದಿರುವ ಕತ್ತಲನ್ನು ಸರಿಸಿ ರೋಗಿಗಳಿಗೆ ಆರೋಗ್ಯದ ಬೆಳಕು ನೀಡಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.