ಬೀದರ್ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಎನ್ನಲಾಗುತ್ತಿರುವ ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್ ಸೇರಿ ಐವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ಮಾಜಿ ಜಿಪಂ ಉಪಾಧ್ಯಕ್ಷ ಗೊರಕನಾಥ್ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ್ ನಾಗಭುಜಂಗೆ, ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ್ ಹಾಗೂ ಸತೀಶ್ ರತ್ನಾಕರ್ ಅವರನ್ನು ಬಂಧಿಸಿ, ನಗರದ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಎದುರು ಹಾಜರು ಪಡಿಸಿದರು.
ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕವಾಗಿ ತೆಗೆದಿರುವ ಸಿಐಡಿ ಕಚೇರಿಯಲ್ಲಿ ಡಿಐಜಿಪಿ ಶಾಂತನು ಸಿನ್ಹಾ ಅವರ ಎದುರು ಐದು ಜನ ವಿಚಾರಣೆಗೆ ಹಾಜರಾದರು. ಅವರ ಹೇಳಿಕೆ ದಾಖಲಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರಿಗೆ ರೂ. 10 ಸಾವಿರ ಸಂಭಾವನೆ; ಭರವಸೆ ಹುಸಿಯಾಗದಿರಲಿ
ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಸಚಿನ್ ಪಾಂಚಾಳ್ ಡಿ.26 ರಂದು ರಾಜು ಕಪನೂರ್ ಸೇರಿದಂತೆ ಎಂಟು ಜನರು ಹೆಸರು ಉಲ್ಲೇಖಿಸಿದ ಮರಣಪತ್ರ ಬರೆದಿಟ್ಟು ಬೀದರ್- ಹೈದರಾಬಾದ್ ಮಾರ್ಗದ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಜ.6ರಂದು ಸಿಐಡಿ ತನಿಖಾ ತಂಡವು ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಆಗಮಿಸಿದ ಐವರನ್ನು ಶುಕ್ರವಾರ ಬಂಧಿಸಿ ಕರೆದೊಯ್ದರು.