ಸದ್ಭಾವನಾ ಮಂಚ್ ವತಿಯಿಂದ ಬೀದರ್ ನಗರದಲ್ಲಿ ಜೂನ್ 30ರಂದು ಬೆಳಿಗ್ಗೆ ʼಸದ್ಭಾವನಾ ನಡಿಗೆʼ ಹಮ್ಮಿಕೊಳ್ಳಲಾಗಿದೆ ಎಂದು ಸದ್ಭಾವನಾ ಮಂಚ ಸಂಚಾಲಕ ಗುರುನಾಥ ಗಡ್ಡೆ ತಿಳಿಸಿದ್ದಾರೆ.
ʼಭಾರತ ಶಾಂತಿಪ್ರಿಯ ದೇಶ. ಅನೇಕತೆಯಲ್ಲಿ ಏಕತೆ ಇದರ ವಿಶೇಷ. ವಿಶ್ವದಲ್ಲಿ ಕೋಮು ಸೌಹಾರ್ದಕ್ಕೆ ಪ್ರಸಿದ್ಧಿ ಪಡೆದಿದೆ. ಶಾಂತಿ, ಸಹಬಾಳ್ವೆ, ಸಹೋದರತ್ವ ಎಲ್ಲ ಧರ್ಮಗಳ ತಿರುಳಾಗಿದೆ. ಆದರೆ, ದೇಶ ಇತ್ತೀಚೆಗೆ ಕೋಮುವಾದ, ಕೊಲೆ, ಗುಂಪು ಕೊಲೆ, ದೊಂಬಿ, ದ್ವೇಷ, ಆರ್ಥಿಕ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಠಗಳಿಗೆ ಹೆಸರುವಾಸಿ ಆಗುತ್ತಿರುವುದು ಕಳವಳಕಾರಿಯಾಗಿದೆʼ ಎಂದು ಹೇಳಿದ್ದಾರೆ.
ʼಸಾಮಾಜಿಕ ಅನಿಷ್ಠಗಳಿಂದ ಮಕ್ಕಳು, ಯುವಕರು ಹಾಗೂ ನಾಗರಿಕರನ್ನು ರಕ್ಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ನಡಿಗೆ ಸಂಘಟಿಸಲಾಗಿದ್ದು, ನಡಿಗೆ ಬಳಿಕ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದುʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಅಂದು ಬೆಳಿಗ್ಗೆ 10:30ಕ್ಕೆ ಮಹಮೂದ್ ಗವಾನ್ ಮದರಸಾದಿಂದ ನಡಿಗೆ ಆರಂಭಗೊಂಡು, ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯಗೊಳ್ಳಲಿದೆʼ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಕನ್ನಡದ ಅಸ್ಮಿತೆಯ ಕವಯಿತ್ರಿ ಜಯದೇವಿತಾಯಿ ಲಿಗಾಡೆ : ಚಂದ್ರಕಾಂತ ಶಾಬಾದಕರ್
ಶಾಂತಿ, ಸಹಬಾಳ್ವೆ ಬಯಸುವ ನಾಗರಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.