ಹೊಸದಾಗಿ ಆರಂಭಿಸಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸುರಕ್ಷತೆ ಪರಿಶೀಲನೆ ನಡೆಸುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ನಿರ್ದೇಶನ ನೀಡಿದ್ದಾರೆ.
2023ರ ಆರಂಭದಲ್ಲಿ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ರಸ್ತೆಯಲ್ಲಿ ಸಂಭವಿಸಿರುವ ಸರಣಿ ಅಪಘಾತಗಳನ್ನು ಗಮನಿಸಿರುವ ಸಚಿವರು ಸುರಕ್ಷತೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ಸುರಕ್ಷತಾ ಅಂಶಗಳ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಜಾರಕಿಹೊಳಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 570ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಟೋಲ್ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, “ಟೋಲ್ ಕಡಿತಗೊಳಿಸಲು ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬಹುದಷ್ಟೇ” ಎಂದು ಹೇಳಿದ್ದಾರೆ. ಎನ್‌ಎಚ್‌ಎಐ ಟೋಲ್ ದರದಲ್ಲಿ 22% ಹೆಚ್ಚಿಸಿ ಇತ್ತೀಚೆಗೆ ಆದೇಶ ಹೊರಡಿಸಿದೆ.