ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಅ ರಾ ಶ್ರೀನಿವಾಸರ ಭಾಷಣ

Date:

Advertisements

ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅ ರಾ ಶ್ರೀನಿವಾಸ ಅವರು ಭಾಷಣ ಮಾಡುತ್ತ, ನಮಸ್ಕಾರ, ಫಿಲ್ಟರ್‌ ಕಾಫಿ ಕುಡಿಯುವುದಕ್ಕೆ ರುಚಿ, ಆದರೆ ಫಿಲ್ಟರ್‌ ಮಾತು ಹಾಗೆ ರುಚಿಯಾಗುವುದಿಲ್ಲ. ಈಗ ಎಂತಹ ಸಮಯ ಬಂದಿದೆ ಎಂದರೆ ಹೊರಗೆ ಮಾತನಾಡುವುದಕ್ಕೆ ಭಯಪಡುವ ಸ್ಥಿತಿ ಇದೆ. ಔಪಚಾರಿಕ ಮಿತಿಯೊಳಗೆ ಮನಸ್ಸಿಗೆ ಬಂದಂತೆ ಮಾತಾಡುವುದು ಈಗಂತೂ ತುಂಬಾ ಕಷ್ಟ. ಮುಕ್ತವಾಗಿ ಮಾತಾಡುವಂತಹ ಅನುಕೂಲಕರ ವಾತಾವರಣ ಈಗ ಇಲ್ಲವಾಗಿದೆ. ಅಧಿಕಾರಸ್ಥರ ವಿರುದ್ಧ ಮಾತಾಡಿದರೆ ಸಾಕು, ಕೂಡಲೇ ಅವರನ್ನು ನಗರ ನಕ್ಸಲರೆಂದೋ, ದೇಶದ್ರೋಹಿಗಳೆಂದೋ, ಅಭಿವೃದ್ಧಿ ವಿರೋಧಿ ಎಂದೋ ಮುದ್ರೆ ಒತ್ತಿ ದೇಶದ ಯಾವುದಾದರೂ ನ್ಯಾಯಾಲಯದಲ್ಲಿ ಕೇಸು ದಾಖಲಾಗುವ ಸಂಕಟ ಎದುರಿಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಗರದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ತಮ್ಮ ಭಾಷಣಕ್ಕೂ ಮುನ್ನ, “ಈಗ ಏನಾಗಿದೆಯೆಂದರೆ ಇಂತಹ ಭಯದ ಕಾರಣದಿಂದ ಸಾಹಿತ್ಯ ಕೂಡ ತನ್ನ ಪ್ರತಿಭಟನೆಯ ಧ್ವನಿಯನ್ನು, ಬಂಡಾಯದ ಧ್ವನಿಯನ್ನು ಕಳೆದುಕೊಂಡುಬಿಟ್ಟಿದೆ. ಸಮೂಹ ಮಾಧ್ಯಮಗಳಂತೂ ಕೇಳುವುದೇ ಬೇಡ; ಬಗ್ಗಿ ಎಂದರೆ ಮಲಗಿಯೇ ಬಿಟ್ಟಿವೆ. ಯಾವ ಪಕ್ಷ ಅಂತಲ್ಲ, ಎಲ್ಲ ಅಧಿಕಾರಸ್ಥರಿಗೂ ನಮ್ಮಂತಹ ಸಾಹಿತ್ಯಕಾರರ, ಚಿಂತಕರ ಮಾತುಗಳನ್ನು ಕೇಳುವುದು ಇಷ್ಟವಾಗುವುದಿಲ್ಲ. ಅಷ್ಟೇ ಏಕೆ, ಸಾಗರದಂತಹ ಒಂದು ಸಣ್ಣ ಪ್ರದೇಶದ ಸಾಹಿತ್ಯ ಪರಿಷತ್ತಿನ ಸಂಘಟನೆಯಲ್ಲಿರುವವರಲ್ಲಿ ಕೆಲವರಿಗೆ ನಾನು ಏನಾದರೂ ಮಾತಾಡಿಬಿಡಬಹುದು ಎಂಬ ಭಯ, ಹಾಗಾಗಿ ನನ್ನ ಭಾಷಣದ ಪೂರ್ವ ಪರಿಶೀಲನೆ ಮಾಡುವುದು ಒಳ್ಳೆಯದೆಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರು ಎಂಬುದು ನನಗೆ ಗೊತ್ತಾಗಿದೆ. ನಾನು ಇದನ್ನು ನನಗೆ ಮಾಡಿದ ಅವಮಾನವೆಂದು ತಿಳಿಯುವುದಿಲ್ಲ, ಬದಲಿಗೆ ಆ ಸ್ನೇಹಿತರಿಗಿರುವ ಆತಂಕ ಎಂದಷ್ಟೇ ತಿಳಿಯುತ್ತೇನೆ. ಪಾಪ ಅವರ ಬಗ್ಗೆ ನಾನು ಕೇವಲ ಕನಿಕರ ತೋರಿಸಬಹುದು ಅಷ್ಟೆ” ಎಂದರು.

“ನನಗೆ ಕಂಡಂತೆ ದೇಶದಲ್ಲಿ ಈಗ ಎಲ್ಲಕ್ಕಿಂತಲೂ ಅಪಾಯಕಾರಿಯಾಗಿರುವ ಸಂಗತಿ ಏನಾದರೂ ಇದ್ದರೆ ಅದು ಬೌದ್ಧಿಕ ದಾಸ್ಯ ಮತ್ತು ಗುಲಾಮಿ ಮಾನಸಿಕತೆ. ಹೋಗಲಿ ಬಿಡಿ, ಈ ಪರಿಸ್ಥಿತಿ ಮುಂದೆ ಎಂದಾದರೂ ಸುಧಾರಿಸಿ ಈ ಮೊದಲಿನಂತೆ ಅಭಿವ್ಯಕ್ತಿಯ ಮುಕ್ತ ವಾತಾವರಣ ನಿರ್ಮಾಣವಾಗಬಹುದು ಎಂದು ಆಸೆ ಇರಿಸಿಕೊಳ್ಳುತ್ತೇನೆ. ಸ್ನೇಹಿತರೇ, ಭಯಪಡುವುದು ಬೇಡ, ನಾನು ನಿಮ್ಮ ಆತಂಕವನ್ನು ಧಿಕ್ಕರಿಸುವುದಿಲ್ಲ, ಗೌರವಿಸುತ್ತೇನೆ. ನಿಮ್ಮ ಮನಸ್ಸಿಗೂ ತಟ್ಟಬಹುದಾದ ಮಾತುಗಳನ್ನೇ ಆಡುತ್ತೇನೆ, ನಿರಾಳವಾಗಿರಿ” ಎಂದು ಮೊದಲೇ ಸಮಾಧಾನ ಮಾಡಿ ತಮ್ಮ ಭಾಷಣ ಶುರು ಮಾಡಿದರು.

Advertisements

“ವೇದಿಕೆಯ ಮೇಲಿರುವ ಆಹ್ವಾನಿತ ಗಣ್ಯ ಮಾನ್ಯರೇ, ಸಭಾಂಗಣದಲ್ಲಿರುವ ಸ್ನೇಹಿತರೇ, ಎಲ್ಲರಿಗೂ ನನ್ನ ನಮಸ್ಕಾರಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಸಾಗರ ತಾಲೂಕು ಶಾಖೆಯು ನೀಡಿದ ಸ್ನೇಹದ ಆಹ್ವಾನವನ್ನು ನಮ್ರನಾಗಿ ಸ್ವೀಕರಿಸಿ, ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತ, ಇದೀಗ ಇಲ್ಲಿ ನಿಂತಿದ್ದೇನೆ. ನಾನು ಇಲ್ಲಿ ಹೀಗೆ ನಿಂತಿದ್ದೇನೆ ಎಂದ ಕೂಡಲೇ ನನಗೆ ತಲೆಯ ಮೇಲೆ ಯಾವುದೇ ಕೊಂಬುಗಳಿಲ್ಲ. ಅಥವಾ ಯಾವುದೋ ಪ್ರತ್ಯೇಕವಾದಂತಹದ್ದು ಇನ್ನೇನೋ ಇಲ್ಲ. ನಾನೂ ಕೂಡ ಎಲ್ಲರ ಹಾಗೆ ಸಾಮಾನ್ಯನೇ. ಎಲ್ಲರ ಹಾಗೆ ನನಗೂ ಸಂಕಟ, ಸಂಭ್ರಮ ಎಲ್ಲವೂ ಆಗುತ್ತದೆ. ಆದರೆ ಒಂದೇ ಸರಳವಾದ ವ್ಯತ್ಯಾಸವೇನೆಂದರೆ ಎಲ್ಲ ಸಾಮಾನ್ಯರಿಗಿಂತ ನಾನು ಹೆಚ್ಚು ವೈಯಕ್ತಿಕವಲ್ಲದ ಸಂಗತಿಗಳಿಗೆ ಸ್ಪಂದಿಸುತ್ತೇನೆ ಮತ್ತು ಇಂತಹದ್ದೆಲ್ಲ ಇಲ್ಲಿ ಆಗುತ್ತಿದೆಯಲ್ಲ ಎಂದು ದಾಖಲಿಸುತ್ತ ಉಳಿದೆಲ್ಲರೊಂದಿಗೆ ಹಂಚಿಕೊಂಡು ಸಂವಾದ ನಡೆಸುವ ಪ್ರಯತ್ನ ಮಾಡುತ್ತೇನೆ” ಎಂದರು.

“ಸಾಹಿತ್ಯ ಎನ್ನುವುದು ವ್ಯಕ್ತಿಗತ ಚಿಂತನ ಮಂಥನದ ಫಲಿತವಾದರೂ ಅದರ ಗಮ್ಯ ವೈಯಕ್ತಿಕವಲ್ಲ. ಒಟ್ಟು ನಾವೆಲ್ಲ ಬದುಕುತ್ತಿರುವ ಸಮುದಾಯದ ಪ್ರಜ್ಞಾವಿಕಾಸಕ್ಕೆ ಅದು ಸಂದರೆ ಮಾತ್ರ ಅಂತಹ ಸಾಹಿತ್ಯವು ಪರಿಣಾಮಕಾರಿಯಾಗುತ್ತದೆ. ಹೀಗೆ ಹೇಳಿದರೂ ನಾನು ಎಲ್ಲಿದ್ದೇನೆ ಮತ್ತು ನನ್ನ ಸಾಹಿತ್ಯ ನನ್ನ ಆದರ್ಶದ ಆ ಪ್ರಜ್ಞಾವಲಯವನ್ನು ಸಮುದಾಯದ ನಡುವೆ ಎಷ್ಟು ವಿಕಾಸಗೊಳಿಸಿದೆ ಎಂಬುದರ ಮೌಲ್ಯಮಾಪನ ನಾನು ಮಾಡುವಂತಹದ್ದಲ್ಲ; ಅದೇನಿದ್ದರೂ ಎದುರುಗಡೆ ಇರುವ ಸಾಮಾನ್ಯರಾದವರು ಮಾಡುವಂತಹದ್ದು. ಹಾಗಿರುತ್ತ ಸಾಮಾನ್ಯರು ಎಂದು ನಿಮನ್ನೆಲ್ಲ ಹೇಗೆ ಕರೆಯಲಾಗುತ್ತದೆ? ಅಲ್ಲದೇ ಸರ್ಕಾರವನ್ನೇ ಆಯ್ಕೆ ಮಾಡುವಾತ ಸಾಮಾನ್ಯ ಹೇಗಾಗುತ್ತಾನೆ” ಎಂದು ಪ್ರಶ್ನಿಸಿದರು.

“ನಾನು ಉಪದೇಶವನ್ನಾಗಲೀ, ಆದೇಶವನ್ನಾಗಲೀ ಕೊಡುವ ಸ್ಥಾನದಲ್ಲಿದ್ದವನಲ್ಲ. ಹಾಗಾಗಿ ನಾನು ನನ್ನ ಭಾಷಣದ ಮೂಲಕ ನನ್ನ ಅನಿಸಿಕೆಗಳನ್ನು ನಿಮೆಲ್ಲರ ಮುಂದೆ ವಿನಮ್ರನಾಗಿ ಇಡುತ್ತಿದ್ದೇನೆ ಅಷ್ಟೆ. ನಿಮ್ಮ ಹೆಚ್ಚು ಸಮಯ ತೆಗೆದುಕೊಳ್ಳದೇ, ಊರುದ್ದಕ್ಕೂ ಅಲೆಯದೇ ನೇರವಾಗಿ ಒಂದೆರಡು ಕೇಂದ್ರ ಅಂಶದ ಮೇಲೆ ನಾನು ಎರಡು ಭಾಗಗಳಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಮುಂದೆ ನಾನು ಆಡಲಿರುವ ಮಾತುಗಳು ನನ್ನ ಸ್ವತಂತ್ರ ಚಿಂತನೆಯ ಫಲ ಮಾತ್ರ ಎಂದು ಮೊದಲಿಗೆ ತಿಳಿಸಲು ಬಯಸುತ್ತೇನೆ. ಮತ್ತು ನಾನು ಆಡಲಿರುವ ಮಾತುಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂಬ ಹಠವಾಗಲಿ ಹಂಬಲವಾಗಲಿ ನನಗೆ ಇಲ್ಲ. ಅಭಿಪ್ರಾಯಗಳು ಇರಬೇಕಾದದ್ದೇ ಹಾಗೆ. ಭಿನ್ನತೆಯು ಸಮುದಾಯದ ಆರೋಗ್ಯದ ಲಕ್ಷಣ ಕೂಡ. ಆದರೆ ಆ ಕಾರಣದಿಂದ ಪರಸ್ಪರ ಮನಸ್ತಾಪಗಳು ಬರದಂತೆ ನಾವೆಲ್ಲರೂ ವಿಷಯ ಮಾತ್ರಕ್ಕೆ ನಮ್ಮ ಭಿನ್ನತೆಯನ್ನು ಸೀಮಿತಗೊಳಿಸಿಕೊಳ್ಳಬೇಕು ಅಷ್ಟೆ. ಪರಸ್ಪರ ಎದುರುಬದುರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಬೇಕು, ಬಿಟ್ಟರೆ, ಬೇರೆ ಯಾವ ದಾರಿಯಾದರೂ ಅದು ಅಪೇಕ್ಷಣೀಯವಲ್ಲ, ಸೌಜನ್ಯವೂ ಅಲ್ಲ” ಎಂದರು.

ಭಾಗ-1
ವಲಸೆ-ವೈಷಮ್ಯ

ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರ ಕವಿತೆಯ ಸಾಲುಗಳನ್ನು ಇಲ್ಲಿ ನೆನಪಿಸಿಕೊಂಡು ಅಭಿಪ್ರಾಯ ಮಂಡನೆಗೆ ತೊಡಗುತ್ತಿದ್ದೇನೆ. ಅವರು ಹೀಗೆ ಬರೆಯುತ್ತಾರೆ:

 ಸಾಮಾನ್ಯನೆಂದೆಯ? ತಪ್ಪು, ತಿಳಿದಿರು ಜೋಕೆ:
 ಬೇಡಿಗೆ ಕೈಯೊಡ್ಡದವ, ಕತ್ತಿಗೆ ಇಕ್ಕಿದುರುಳನ್ನೆ
 ಕಚ್ಚುತ್ತ ಕಡಿಯುತ್ತ ಸಿಗಿಯುತ್ತ ಅಗೆಯುತ್ತ
 ಬಗೆಯುತ್ತಲೇ ಕಣ್ಣ ಮುಚ್ಚುವವ, `ತಾಳಕ್ಕೆ ಸರಿ ಹೆಜ್ಜೆ'
 ಹೂಂಕರಿಸುತ್ತಲಿದ್ದರೂ ನಿನ್ನ ಪಿಸ್ತೂಲು
 ಮನಸ್ಸಿನಲ್ಲೇ ಬೇರೆ ತಾಳ ಲಯ ನಿಭಾಯಿಸುವ
 ಹುಟ್ಟಾ ಸ್ವತಂತ್ರ ಪರಮಾಣುದೇಹಿ.
 ಮುಖ ಕೆತ್ತಿಸಿಕೊಂಡ ಸಾಮಾನ್ಯದ ಪೂಜಾರಿಯೇ
 ನೀ ತೊಟ್ಟ ಮುಖವಾಡ ಹಿರಣ್ಯಾಕ್ಷನದು. ಚಾಪೆ ಸುತ್ತಿ ನೆಲ
 ಕಂಕುಳಲ್ಲಿಟ್ಟು ಕುರ್ಚಿಯ ಕಚ್ಚಿ ಅಂಟಿಕೊಳ್ಳುವ ಹುನಾರು
 ನಿನಗೆ-ಮುಖವುಳ್ಳವರ ಮೂತಿ ಕೆತ್ತಿ ಅಥವಾ ದೊಡ್ಡಿಯಲ್ಲಿಟ್ಟು.
 ಅಗಗೋ, ದಾಡಿ ಮಸೆವ ವರಾಹ ಕಣ್ಣ ಮಿಟುಕದೆ ದಿಟ್ಟಿ
 ಸುತ್ತ ಇದೆ ಗಡಿಯಾರ ಮುಖವ. ಕಂಭದೊಳಕ್ಕೆ
 ಸಿಕ್ಕಿಬಿದ್ದಣು ನಾನು ನರಸಿಂಹ. ಕಾಯುತ್ತೇನೆ-
 ನಾನು ಕೂಡ.
                                       (ಸಾಮಾನ್ಯನಂತೆ ಈ ನಾನು)

ಯಾವಾಗೆಲ್ಲ ನಾವು ಕರೆಯುವ ಈ ಸಾಮಾನ್ಯ ದುರುಪಯೋಗದ ವಸ್ತುವಾಗುತ್ತಾನೋ, ಯಾವಾಗೆಲ್ಲ ಆತ ಅನ್ಯಾಯದ ವಿರುದ್ಧ ಮೌನ ತಾಳುತ್ತಾನೋ ಆವಾಗೆಲ್ಲ ಇತಿಹಾಸ ಚಕ್ರ ತಾನು ತಿರುಗುವುದನ್ನು ನಿಲ್ಲಿಸಿಬಿಡುತ್ತದೆ. ಕಂಭದೊಳಗಿದ್ದ ಈ ಸಾಮಾನ್ಯ ನರ ಸಂದರ್ಭ ಬಂದಾಗ ಸಿಂಹನಾಗುವುದು ಕಾಲ ಕಾಲದ ಅಗತ್ಯವೆಂದು ಮತ್ತೆ ಹೇಳಬೇಕಾಗಿಲ್ಲ. ಆದರೆ ಇತ್ತೀಚಿನ ಇತಿಹಾಸವೆಲ್ಲ ಈ ಸಾಮಾನ್ಯರು ಸ್ವಾರ್ಥಿಗಳ ದಾಳವಾಗುತ್ತ ಸಿಂಹವಾಗುವುದನ್ನು ಮರೆತ ನರರ ಕತೆಯೇ ಆಗುತ್ತಿದೆ. ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳು ಘಟಿಸುತ್ತಲೇ ಇದ್ದರೂ ಈ `ಪರಮಾಣುದೇಹಿ’ ಸಿಡಿಯುವುದನ್ನು ಮರೆತೇ ಬಿಟ್ಟಿದ್ದಾನೇನೋ ಅನಿಸುತ್ತದೆ. ಎಂದರೆ ಆತನಿಗೆ ಅದು ಯಾವುದೂ ಜಾಗೃತವಾಗದಂತೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಬಲವಂತವಾಗಿ, ಬುದ್ಧಿವಂತಿಕೆಯಿಂದ ಮುಚ್ಚಿಸಿ, ಮುಚ್ಚಿಸಿದವರು ಸುರಕ್ಷಿತವಾಗಿದ್ದಾರೆ.

ಹೀಗೆ ಈ ಅಭಿಪ್ರಾಯದ ಆಧಾರದ ಮೇಲೆ ನಾನು ನನ್ನ ಮಾತಿನ ಪ್ರಬಂಧ ಕಟ್ಟುತ್ತೇನೆ. ನಾನು ನನ್ನ ಮಾತುಗಳನ್ನು ಮುಂದುವರಿಸುವ ಮೊದಲು ಅದಕ್ಕೊಂದು ಅಡಿಪಾಯ ಹಾಕಬೇಕಾಗುತ್ತದೆ. ಈಗ ನಿಮ್ಮ ಮುಂದೆ ಉಲ್ಲೇಖಿಸಿದ ನಂತರದಲ್ಲಿನ ಸಂಗತಿಗಾಗಿ ಈ ಅಡಿಪಾಯದ ಅಗತ್ಯವಿದೆ. ಮತ್ತೆ ಒಟ್ಟು ಮೂರು ಉದೃತಿಗಳನ್ನು ದಾಖಲಿಸುತ್ತೇನೆ. ಮೊದಲನೆಯದು ಇದು:

 1. `ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್‌।
     ಉದಾರಚರಿತಾನಾಂ ತು ವಸುದೈವ ಕುಟುಂಬಕಮ್‌॥

ವಿವರವಾದ ಅರ್ಥ ವ್ಯಾಖ್ಯಾನಕ್ಕೆ ಹೋಗುವುದು ಈಗ ಅಗತ್ಯವಿಲ್ಲ. ಸಂದರ್ಭದ ಅಗತ್ಯಕ್ಕೆಷ್ಟು ಅಗತ್ಯವೋ ಅಷ್ಟನ್ನು ಹೇಳುತ್ತೇನೆ. `ಇವನು ತನ್ನವನು, ಅವನು ಅನ್ಯನು ಎಂಬ ಎಣಿಕೆ ಸಣ್ಣ ಮನಸ್ಸಿನವರದು; ಆದರೆ ಉದಾರ ಚರಿತರಿಗೆ, ಎಂದರೆ ವಿಶಾಲ ಮನಸ್ಸಿನವರಿಗೆ, ಭೂಮಿಯೇ ಕುಟುಂಬ’. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಇವನು ನಮ್ಮ ಧರ್ಮದವನು, ಇವನು ಅನ್ಯ; ಇವನು ನಮ್ಮ ಜಾತಿ, ಇವನು ಅನ್ಯ; ಇವನು ಬೇರೆ ಊರಿನವನು, ದೇಶದವನು ಅಂತೆಲ್ಲ ತಿಳಿಯವವರು ಸಣ್ಣ ಮನಸ್ಸಿನವರು. ಆದರೆ ಜಗತ್ತೇ ಒಂದು ಕುಟುಂಬದಂತೆ ಎಂದಾದ ಮೇಲೆ ಎಲ್ಲರೂ ನಮವರೇ ಎಂದು ಉದಾತ್ತ ಗುಣವುಳ್ಳವರು ತಿಳಿಯುತ್ತಾರೆ. ಈ ಶ್ಲೋಕವು ಮಹಾ ಉಪನಿಷತ್‌ನಿಂದ ತೆಗೆದುಕೊಂಡಿದ್ದು. ಸ್ವಾರಸ್ಯವೆಂದರೆ ಈ ಶ್ಲೋಕವನ್ನು ಲಾಗಾಯ್ತಿನಿಂದಲೂ ತಿರುತಿರುಗಿ ಉಚ್ಚರಿಸಿ ಹಳೆ ಕಾಲದ ಗ್ರಾಮಫೋನ್‌ ಪ್ಲೇಟ್‌ ಸವೆದು ಹೋಗುವಂತೆ ಸವೆದು ಹೋಗಿಬಿಟ್ಟಿದೆ, ಕ್ಲೀಷೆಯಾಗಿಬಿಟ್ಟಿದೆ. ಆದರೆ ವಾಸ್ತವದಲ್ಲಿ ಆ ಶ್ಲೋಕದ ಆದರ್ಶ ನಮ ನಡವಳಿಕೆಯಲ್ಲಿದೆಯೇ? ಇವನು ನಮವನಲ್ಲ, ಇವನು ಹೊರಗಿನವನು, ಬೇರೆ ಧರ್ಮದವನು, ಇವನು ಈ ದೇಶದವನಲ್ಲ, ಹೊರಗಿನಿಂದ ಬಂದವನು ಅಂತೆಲ್ಲ ಶ್ಲೋಕದ ಭಾವನೆಗೆ ವಿರುದ್ಧವಾದ ನಡವಳಿಕೆಯಿದೆ, ಮತ್ತು ಹಾಗಿರುವುದಕ್ಕಾಗಿಯೇ ತೀವ್ರ ಸಂಘರ್ಷಗಳು ಘಟಿಸುತ್ತಲೇ ಇರುತ್ತವೆ.

ಮತ್ತೆ ಎರಡು ಪದ್ಯದ ಸಾಲನ್ನು ಉದ್ಧರಿಸುತ್ತೇನೆ:

 ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು
 ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು।
 ಒಂದೆ ಗಾಳಿಯನುಸಿರ್ವ  ನರಜಾತಿಯೊಳಗೆಂತು।
 ಬಂದುದೀ ವೈಷಮ್ಯ-ಮಂಕುತಿಮ
 ಮನುಜ ಕುಲವೊಂದೊಬ್ಬನಿನ್ನೊಬ್ಬನಂತಿಲ್ಲ।
 ತನುವಂಗಗಳೊಳೊಂದು, ರೂಪ ಗುಣ ಬೇರೆ॥
 ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವೀ।
 ತನುವೇಕದೊಳ್‌ ಬಹುಳ-ಮಂಕುತಿಮ                 -ಮಂಕುತಿಮನ ಕಗ್ಗ

ಈ ಎರಡೂ ಪದ್ಯಗಳ ಮತಿತಾರ್ಥ ತುಂಬ ಸರಳವಾಗಿದೆ. ಈ ಆಕಾಶ, ಈ ನೀರು, ಈ ಗಾಳಿ ಹೀಗೆ ಏನೆಲ್ಲ ಪಂಚಭೂತಗಳು ಇವೆಯೋ ಅದೆಲ್ಲವನ್ನೂ ಎಲ್ಲರೂ ತಮತಮಗೆ ಬೇಕಾದ ಹದದಲ್ಲಿ ಬೇಕು ಬೇಕಾದಾಗ ಒಂದೇ ಸಮನಾಗಿ ಅನುಭವಿಸುತ್ತಾರೆ. ಆದರೆ ಹೀಗಿದ್ದರೂ ಅವರ ನಡುವೆ ಈ ವೈಷಮ್ಯ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬ ಅಚ್ಚರಿ, ಪರೋಕ್ಷ ವ್ಯಾಕುಲತೆ ಮೊದಲ ಸಾಲುಗಳಲ್ಲಿ ವ್ಯಕ್ತವಾಗಿದೆ. ಎರಡನೆಯದರಲ್ಲಿ ಅದು ಇನ್ನಷ್ಟು ಸಾಂದ್ರವಾಗಿದೆ. ಮನುಷ್ಯರು ಒಬ್ಬರಂತೆ ಮತ್ತೊಬ್ಬರು ಇರುವುದಿಲ್ಲ, ಎಲ್ಲರ ಶರೀರದ ಅಂಗಗಳು ಒಂದೇ ಇದ್ದರೂ ರೂಪು ಗುಣ ಎಲ್ಲ ಬೇರೆ ಬೇರೆ ಇರುತ್ತದೆ; ಆದರೆ ಒಂದೇ ಶರೀರದಲ್ಲಿ ಬೇರೆ ಬೇರೆ ಅಂಗಗಳಿದ್ದರೂ ಅವೆಲ್ಲ ಕೂಡಿಕೊಂಡು ಒಂದೇ ತನುವಾಗುತ್ತದೆ.

ತನುವೇಕದೊಳ್‌ ಬಹಳ ಕೇಳಿದ್ದೇವೆ: ಅನೇಕತೆಯಲ್ಲಿ ಏಕತೆ’, `ನಾವೆಲ್ಲರು ಒಂದೇ ಜಾತಿ ಒಂದೆ ಮತ ನಾವು ಮನುಜರು’ (ಅಡಿಗ).

ನಾನು ಈ ಮೂರು ಅಭಿಪ್ರಾಯಗಳನ್ನು ಉದ್ಧರಿಸಿದ್ದು, ನಾನು ಮುಂದೆ ಹೇಳಲಿರುವ ಮಾತುಗಳಿಗೆ ಒತ್ತಾಸೆಯಾಗಿರಲಿ ಎಂಬುದಕ್ಕಾಗಿ. ಇವೆಲ್ಲವೂ ಆದರ್ಶಕ್ಕೆ ಸರಿ, ಆದರೆ ವಾಸ್ತವದ ಆಚರಣೆಯಲ್ಲಿ ಅಷ್ಟಾಗಿ ಇರುವುದಿಲ್ಲ. ಮತ್ತೆ ಎಷ್ಟೇ ಆದರ್ಶ ದೊಡ್ಡದಾಗಿದ್ದರೂ ಅದು ಆಚರಣೆಯಲ್ಲಿಲ್ಲವೆಂತಾದರೆ ಅವೆಲ್ಲ ಕಸ ಮಾತ್ರವಾಗುತ್ತದೆ. ಆ ಮಾತುಗಳು ಸದಾ ನಮನ್ನು ಅಣಕಿಸುತ್ತಿರುತ್ತವೆ. ಈ ವೈರುಧ್ಯವನ್ನು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಸಾಮಾನ್ಯರು ಎಂದು ಕರೆಯುವ `ನರ ಸಿಂಹ’ರು.

“ಅಭಿವೃದ್ಧಿ ಎಂದರೆ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದು ಎಂದಾದರೆ ಅಂತಹ ಅಭಿವೃದ್ಧಿಯನ್ನು ಸಾಮಾನ್ಯರು ತಿರಸ್ಕರಿಸಬೇಕು. ಆದರೆ ಅದು ಸಾಧ್ಯವಾಗುವುದು ಸ್ವಿಚ್‌ ಹಾಕಿದಾಗ ಹೊತ್ತಿಕೊಳ್ಳುವ ಬೆಳಕಿನ ಹಿಂದೆ ಅದೆಂತಹ ಕರಾಳ ಕತೆಯೂ ನೋವಿನ ಪ್ರಪಂಚವೂ ಇದೆ ಎಂಬುದು ಗೊತ್ತಾದಾಗ ಮಾತ್ರ. ಆದರೆ ಸುಖ ಯಾರಿಗೆ ಬೇಡ? ಆದರೆ, ನಮ್ಮ ಊರಿಗೆ ಬಂಗಾರದ ಗಣಿ ಬೇಡ, ಆದರೆ ನಮಗೆ ಬಂಗಾರ ಬೇಕು ಎಂಬ ಮನಃಸ್ಥಿತಿಯಿಂದ ಹೊರಗೆ ಬರಬೇಕು. ನಮಗೆ ಬಂಗಾರ ಬೇಕು ಅಂತಾದರೆ ಮತ್ತೆಲ್ಲೋ ಆ ಬಂಗಾರಕ್ಕಾಗಿ ಗಣಿಗಾರಿಕೆ ಮಾಡಲೇಬೇಕಾಗುತ್ತದೆ. ಆ ಕತ್ತಲ ಪ್ರಪಂಚದ ಅರಿವಿನಿಂದಾಗಿ ಗಣಿಗಾರಿಕೆ ಬೇಡ ಎಂತಾದಾರೆ ಬಂಗಾರವೇ ಬೇಡ ಎಂದಾಗಬೇಕು. ಎಂದರೆ ಅತಿಯಾದ ಸುಖಸೌಕರ್ಯಗಳು ಜೀವಜಾಲಕ್ಕೆ ಪರಿಸರಕ್ಕೆ ಮಾರಕವೆಂತಾದರೆ ಅದನ್ನು ನಿಲ್ಲಿಸಲು ಆಗದಿದ್ದರೂ ಕಡಿಮೆಯಾದರೂ ಮಾಡುವಂತೆ ಸಾಮಾನ್ಯರು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.

“ಕೃಷಿಯಲ್ಲಿ ಸುಸ್ಥಿರ ಕೃಷಿ ಎಂಬುದೊಂದು ಪರಿಕಲ್ಪನೆ ಇದೆ. ಅದರ ಹಾಗೇ ಸುಸ್ಥಿರ ಸುಖ’ ಎಂಬ ಪರಿಕಲ್ಪನೆ ಆರಂಭವಾದರೆ ಒಳ್ಳೆಯದು ಎನಿಸುತ್ತದೆ. ಸುಸ್ಥಿರ ಸುಖವೆಂದರೆ ಬೇರೆಯವರಿಗೆ ಸಂಕಟ ಕೊಟ್ಟು, ಎಲ್ಲ ನಮಗೇ ಇರಲಿ ಎಂದು ಸುಖ ಪಡೆಯದೇ, ಮುಂಬರುವವರಿಗೆ ಉಳಿಸುವುದು ಎಂದು ವ್ಯಾಖ್ಯಾನಿಸಬಹುದು. ಹಾಗೆಯೇ ಸುಸ್ಥಿರ ಅಭಿವೃದ್ಧಿ’ ಎಂಬುದೊಂದು ಪರಿಕಲ್ಪನೆ ಜಾರಿಯಲ್ಲಿದೆ. ಈ ಕುರಿತು ಸಾಮಾನ್ಯೀಕರಿಸಿ ಹೇಳುವುದಾದರೆ ಭವಿಷ್ಯದ ಜನಾಂಗಕ್ಕೆ ಕೊರತೆಯಾಗದಂತೆ ಸಮತೋಲಿತ ಅಭಿವೃದ್ಧಿ ಮಾಡುವುದು. ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವನ್ನೂ ಒಂದೇ ಸಲಕ್ಕೆ ನಾಶ ಮಾಡದೇ ಮುಂದಿನವರಿಗೂ ಒಂದಿಷ್ಟು ಉಳಿಸುವುದು. ಇಂಥವೆಲ್ಲ ಇದೆ, ಆದರೆ ಅದು ಜಾರಿಗೊಳ್ಳುವುದು ಹೇಗೆ? ಅದು ಮಿಲಿಯನ್‌ ಡಾಲರ್‌ ಪ್ರಶ್ನೆಗಳಿವೆ. ಹೀಗಾಗಿ, ಕನಿಷ್ಟ ಸದ್ಯಕ್ಕಾದರೂ, ಈಗ ಈ ಯೋಜಿತವಾಗಿರುವ ಶರಾವತಿ ಪಂಪ್‌ಡ್‌ ಯೋಜನೆಯನ್ನು ವಿರೋಧಿಸಬೇಕು. ಅಂತಹದೊಂದು ನಿರ್ಣಯವನ್ನು ಈ ಸಭೆ ಮಾಡಬೇಕು” ಎಂದು ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X