ನನಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುತ್ತೇನೆ, ಅದು ನನ್ನ ಕರ್ತವ್ಯ ಕೂಡ ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಆನಂದಪುರದಲ್ಲಿ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 11 ಕೋಟಿಗೂ ಅಧಿಕ ಅನುದಾನದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಕೆಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, “ಬಿಜೆಪಿ ನಾಯಕರು ಕೊರೋನ ಸಮಯದಲ್ಲಿ ಜನರ ಹಣ ಲೂಟಿ ಮಾಡಿದರು. ಅದರಲ್ಲೂ ಸಾಗರ ಭಾಗದಲ್ಲಿ ಹಾಲಪ್ಪನವರು ಒಂದೇ ಒಂದು ಕಟ್ಟಡವನ್ನು ನಿರ್ಮಿಸದೆ ಅಧಿಕಾರವನ್ನು ಕೊನೆಗೊಳಿಸಿದರು. ಹಾಗೆ ತಮ್ಮ ನಾಯಕರ ಮನೆಗೆ ಸೀಮಿತವಾಗಿ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಾರೆಯೇ ಹೊರತು ಜನರಿಗೆ ಒಂದು ಅನುಕೂಲವಾಗುವಂತಹ ಕೆಲಸವನ್ನೂ ಮಾಡದೆ ಹೋದರು. ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿರಬಹುದು, ಆದರೆ ಕಡು ಬಡವರ ಮನೆಯಲ್ಲಿ ಬೆಳಕನ್ನು ತರಿಸಿದ್ದು ಗ್ಯಾರೆಂಟಿ ಯೋಜನೆಗಳೇ” ಎಂದರು.

10 ವರ್ಷಗಳ ಬಳಿಕ ಜನತೆ ಅಧಿಕಾರ ನೀಡಿದ್ದಾರೆ. ಇದರ ಫಲವಾಗಿ ಯಾವುದೇ ಜಾತಿ, ಧರ್ಮ, ಕುಲ ಮರೆತು ಎಲ್ಲರನ್ನೂ ಸಮಾನರಂತೆ ಕಂಡು ಎಲ್ಲರಿಗೂ ಸೌಲಭ್ಯ ದೊರೆಯುವಂತೆ ಮಾಡುತ್ತೇನೆ. ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ರೈತರಿಗೆ ಹಕ್ಕು ಪತ್ರಗಳನ್ನು ನೀಡಿದರು ಆದರೆ ಅವರ ಬಳಿಕ ಯಾರು ಸಹ ನೀಡಲಿಲ್ಲ. ಈಗ ನಾವು ಮತ್ತೆ ರೈತರಿಗೆ ಹಕ್ಕು ಪತ್ರ ಕೊಡಿಸುವ ಕೆಲಸ ಮಾಡುತ್ತೇವೆ. ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಯು ನನ್ನ ಗುರಿಯಾಗಿದೆ ಹಾಗೆ ಬಡ ಜನರಿಗೆ ಅನುಕೂಲಕರವಾಗುವಂತಹ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಇದ್ದೇನೆ ಮುಂದೇಯೂ ಮುಂದುವರೆಸಿಕೊಂಡು ಹೋಗುವೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಎನ್‌ಎಸ್‌ಯುಐ ಸಾಗರ ತಾಲೂಕು ಘಟಕದ ಅಧ್ಯಕ್ಷರಾಗಿ ಸಿ ಎಂ ಚಿನ್ಮಯ್ ನೇಮಕ
ಈ ವೇಳೆ ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗೆರೆ, ಕೆಡಿಪಿ ಸದಸ್ಯ ರಜಾಕ್, ಬಗರ್ ಹುಕುಂ ಸದಸ್ಯ ರವಿಕುಮಾರ್, ಹೊಸೂರು ಗ್ರಾಪಂ ಉಪಾಧ್ಯಕ್ಷ ಚೌಡಪ್ಪ, ಲತಾ, ಕೋಮಲ, ಮೇನಕ, ಪುಷ್ಪ, ಅಬ್ದುಲ್ ಘನಿ ಹಾಗೂ ಇತರರು ಹಾಜರಿದ್ದರು.
