ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಕಳೆದ ಸೋಮವಾರದಿಂದ ಸುರಿಯುತ್ತಿರುವ ಅಶ್ಲೇಷ ಮಳೆಯ ರಣಾರ್ಭಟಕ್ಕೆ ತಾಲೂಕು ತತ್ತರಿಸಿದ್ದು, ಜನರು ಭಯದಿಂದ ದಿನದೂಡುವ ಪರಿಸ್ಥಿತಿ ಬಂದೊದಗಿದೆ.
ಕಳೆದ ಶನಿವಾರ ಸಂಪೂರ್ಣ ಬಿಡುವು ನೀಡಿದ್ದ ಮಳೆ, ಭಾನುವಾರ ತುಂತುರು ರೂಪದಲ್ಲಿ ಸುರಿಯುತಿತ್ತು. ಆದರೆ, ಸೋಮವಾರ ಮಧ್ಯಾಹ್ನದಿಂದ ಬಿರುಸುಗೊಂಡಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ, ಹಲವೆಡೆ ಭೂಕುಸಿತ ಸಂಭವಿಸಿದ್ದರೆ, ನೀರಿನ ಹರಿವು ಇಳಿಕೆಗೊಂಡಿದ್ದ ಎಲ್ಲ ನದಿಗಳಲ್ಲಿ ಮತ್ತೆ ಪ್ರವಾಹ ಸೃಷ್ಟಿಯಾಗಿದೆ.

ಕಳೆದ ಗುರುವಾರ ಹಾಗೂ ಶುಕ್ರವಾರದ ಮಳೆಗೆ ಪ್ರವಾಹ ಸೃಷ್ಟಿಯಾಗಿದ್ದರಿಂದ ಪಟ್ಟಣದ ಆಝಾದ್ ರಸ್ತೆಯ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿತ್ತು. ಇದನ್ನು ಅನುಸರಿಸಿದ್ದ ನಿವಾಸಿಗಳು, ಮನೆಯ ಸಾಮಗ್ರಿಗಳೊಂದಿಗೆ ವಿವಿಧ ಕಡೆಗೆ ತೆರಳಿದ್ದರು.
ಎರಡು ದಿನಗಳ ಕಾಲ ಮಳೆ ಬಿಡುವು ನೀಡಿದ್ದರಿಂದ ಮನೆಯ ಸಾಮಗ್ರಿಗಳೊಂದಿಗೆ ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದರು. ಆದರೆ, ಸೋಮವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೀರು ಮನೆಬಾಗಿಲಿಗೆ ಬಂದಿರುವುದರಿಂದ ಮತ್ತೆ ಮನೆಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ನುಗ್ಗಿದ್ದ ಪ್ರವಾಹ ಇಳಿಕೆ ಕಂಡಿದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ದೇವಾಲಯ ಸ್ವಚ್ಛಗೊಳಿಸುವ ಕೆಲಸ ನಡೆಸಿತ್ತು. ಆದರೆ, ಮತ್ತೆ ಪ್ರವಾಹ ದೇವಸ್ಥಾನವನ್ನು ಆವರಿಸಿದೆ. ಈ ಮಧ್ಯೆ ದೇವಾಲಯದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿತ್ತು. ಪ್ರವಾಹ ಭೀತಿಯ ನಡುವೆಯೇ ಜನರು ನುಕೂನುಗ್ಗಲಿನಲ್ಲಿ ನಾಗರ ಹಾವನ್ನು ಕಣ್ತುಂಬಿಕೊಂಡರು.
ತಾಲೂಕಿನ ಮಠಸಾಗರ- ಕೃಷ್ಣಾಪುರ ಸಂಪರ್ಕ ಸೇತುವೆಯ ಮೇಲೆ ಸುಮಾರು ಆರು ಅಡಿಯಷ್ಟು ನೀರು ಹರಿಯುತ್ತಿದ್ದು, ಸಮೀಪದ ಅಡಿಕೆ ಹಾಗೂ ಕಾಫಿತೋಟ ಸಂಪೂರ್ಣ ಮುಚ್ಚಿಹೋಗಿದೆ. ಇದರಿಂದಾಗಿ ಕೋಟ್ಯಂತರ ರೂ ನಷ್ಟ ಸಂಭವಿಸಿದೆ. ಸೇತುವೆ ಮುಳುಗಡೆಯಿಂದ ಕೃಷ್ಣಾಪುರ ಸೇರಿದಂತೆ ಮತ್ತೆರಡು ಗ್ರಾಮಗಳು ರಸ್ತೆ ಸಂಪರ್ಕವಿಲ್ಲದೆ ದ್ವೀಪಗಳಾಗಿವೆ. ಪಟ್ಟಣದಿಂದ ಹೆಬ್ಬಸಾಲೆ ಹಾಗೂ ಹೆನ್ನಾಲಿ ಗ್ರಾಮ ಸಂಪರ್ಕ ರಸ್ತೆ ಹೇಮಾವತಿಯ ಹೊರಪ್ರವಾಹದಿಂದ ಮತ್ತೆ ಮುಚ್ಚಿಹೋಗಿದೆ.
ಹೆದ್ದಾರಿ ಕುಸಿತ:
ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲೆ ಗ್ರಾಮ ಸಮೀಪ ಮತ್ತೆ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್, ಲಾರಿ, ಎರಡು ಕಾರುಗಳು ಸೇರಿದಂತೆ ಆರು ವಾಹನಗಳು ಮಣ್ಣಿನಡಿ ಸಿಲುಕಿತ್ತು. ವಾಹನದಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿದೆ.
ಕಳೆದ ವಾರ ಸಹ ಇದೆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಮಾರುತಿ ವ್ಯಾನ್ ಒಂದು ಮಣ್ಣಿನಡಿ ಸಿಲುಕಿ, ಇಬ್ಬರು ಗಾಯಗೊಂಡಿದ್ದರು. ಇದೇ ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಭೂಕುಸಿತ ಸಂಭವಿಸುತ್ತಿದ್ದು, ನಿರಂತರವಾಗಿ ಮಣ್ಣು ತೆರವುಗೊಳಿಸಲಾಗುತ್ತಿದೆ. ಆದರೂ ಕೂಡ ಮಳೆ ಹೆಚ್ಚಾದಂತೆ ಭೂಕುಸಿತ ಸಹ ಹೆಚ್ಚಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿದಂತೆ ಹೆದ್ದಾರಿ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಸ್ಥಳಕ್ಕೆ ತಾಲೂಕಿನ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹೆದ್ದಾರಿಯ ಎರಡು ಬದಿಯಲ್ಲಿ ಹತ್ತಾರು ಕಿ.ಮಿ ವಾಹನಗಳು ಸರತಿಸಾಲಿನಲ್ಲಿ ನಿಂತಿದ್ದವು. ಘಾಟ್‌ರಸ್ತೆಯಲ್ಲಿ ಮಳೆಯ ನಡುವೆ ಊಟತಿಂಡಿ ಇಲ್ಲದೆ ಪ್ರಯಾಣಕರು ಪರದಾಡುವಂತಾಗಿತ್ತು.
ದೊಡ್ಡತಪ್ಲು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳವಾರ ಉಂಟಾದ ಭೂ ಕುಸಿತದ ಸ್ಥಳದಲ್ಲಿ, ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇಂದು (ಬುಧವಾರ) ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಶೀಘ್ರವಾಗಿ ಕಾರ್ಯ ನಿರ್ವಹಿಸಲು ಸಲಹೆ ನೀಡಿದ್ದಾರೆ.

ಕಳೆದ ಶುಕ್ರವಾರ ಹಾರ್ಲೇ-ನಡಹಳ್ಳಿ ಗ್ರಾಮ ಸಂಪರ್ಕಿಸುವ ಕಾಂಕ್ರಿಟ್ ರಸ್ತೆಯ ಅಡಿಭಾಗದಲ್ಲಿ ಮಣ್ಣು ಕುಸಿದು ಅಪಾಯದ ಮುನ್ಸೂಚನೆ ನೀಡಿತ್ತು. ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಸುಮಾರು 200 ಮೀಟರ್ ರಸ್ತೆ ಸುಮಾರು ನೂರು ಅಡಿಗಳ ಆಳದವರಗೆ ಕೊಚ್ಚಿ ಹೋಗಿದ್ದು ನಡಹಳ್ಳಿ, ದೇಖ್ಲಾ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಬಂದ್ ಆಗಿದೆ.
ಸ್ಥಳಕ್ಕೆ ಉಪ ವಿಭಾಗಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯ ಹೆದ್ದಾರಿ 107ರ ಬಾಗರವಳ್ಳಿ ಗ್ರಾಮ ಸಮೀಪ ಭೂಕುಸಿತ ಸಂಭವಿಸಿದ್ದು, ರಸ್ತೆ ಅಪಾಯದ ಸ್ಥಿತಿ ತಲುಪಿದೆ. ಇದೇ ರಸ್ತೆಯ ಹೆತ್ತೂರು ಗ್ರಾಮ ಸಮೀಪ ಶುಕ್ರವಾರ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಮತ್ತೆ ಭೂಮಿ ಕುಸಿದಿದ್ದು ರಾಜ್ಯ ಹೆದ್ದಾರಿ ಅಪಾಯದ ಸ್ಥಿತಿ ತಲುಪಿದೆ. ರಾಷ್ಟ್ರೀಯ ಹೆದ್ದಾರಿ ಹಲವೆಡೆ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಕಿ ಮುಚ್ಚುವ ಮೂಲಕ ಮಳೆ ನೀರು ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗಿದೆ.
ಯಸಳೂರು ಗ್ರಾಮದ ದೊಡ್ಡಭತ್ತದ ಗದ್ದೆ ಬಯಲು ಹೇಮಾವತಿಯ ಹಿನ್ನೀರಿಗೆ ಸಂಪೂರ್ಣ ಮುಳುಗಡೆಯಾಗಿದೆ. ನೂರು ಎಕರೆಗೂ ಅಧಿಕ ಭತ್ತದ ಗದ್ದೆಗಳಲ್ಲಿ ನಾಟಿ ಮಾಡಲಾಗಿದ್ದು, ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ನಾಶ ನಷ್ಟ ಸಂಭವಿಸಿದೆ ಎಂದು ಅಲ್ಲಿನ ರೈತರು ಈ ದಿನ.ಕಾಮ್‌ಗೆ ಮಾಹಿತಿ ತಿಳಿಸಿದ್ದಾರೆ.
“ಯಸಳೂರು ದೊಡ್ಡಗದ್ದೆಬಯಲು ಜಲಾವೃತಗೊಂಡಿದೆ. ಇದರಿಂದಾಗಿ ಹಲವು ರೈತರ ಬೆಳೆಗಳಿಗೆ ಹಾನಿ ಉಂಟಾಗಿದೆ” ಎಂದು ಅಲ್ಲಿನ ಸ್ಥಳೀಯ ನಿವಾಸಿ ಅಕ್ಬರ್ ಈ ದಿನ .ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ದುರಸ್ತಿ ಮುಂದಕ್ಕೆ:
ಶಿರಾಡಿ ಘಾಟ್‌ನಲ್ಲಿ ಕಳೆದ 24 ಗಂಟೆಯಲ್ಲಿ 340 ಮೀ.ಮೀಟರ್ ಮಳೆಯಾಗಿದೆ. ಇದರಿಂದಾಗಿ ತಾಲೂಕಿನ ಕಡಗರಹಳ್ಳಿ ಸಮೀಪ ಭೂಕುಸಿತ ಸಂಭವಿಸಿ ಹಾನಿಗೊಂಡಿರುವ ರೈಲ್ವೆ ಹಳಿ ದುರಸ್ತಿಗೆ ಸಮಸ್ಯೆಯಾಗಿದ್ದು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರೈಲ್ವೆ ಹಳಿ ದುರಸ್ತಿಗಾಗಿ 700 ಕಾರ್ಮಿಕರನ್ನು ಕರೆಸಲಾಗಿದೆ. ಆದರೆ, ದುರಸ್ತಿ ಕಾರ್ಯಕ್ಕೆ ಮಳೆ ತೀವ್ರ ಪ್ರಮಾಣದಲ್ಲಿ ಅಡ್ಡಿ ಉಂಟು ಮಾಡಿದ್ದು, ಕುಸಿದ ಹಳಿಯ ಸಮೀಪ ನದಿಯಂತೆ ಮಳೆ ನೀರು ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ರೈಲ್ವೆ ಹಳಿ ದುರಸ್ತಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ತಾಲೂಕಿನಲ್ಲಿ ಹೆಚ್ಚಿರುವ ಮಳೆಯ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಶಾಸಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿ ಶಾಸಕರ ಮನವಿಗೆ ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಶಾಸಕ ಸಿಮೆಂಟ್ ಮಂಜು, ಸೊಷಿಯಲ್ ಮೀಡಿಯಾದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಮಳೆಯಿಂದ ಏನೇ ಅನಾಹುತವಾದರೂ ಜಿಲ್ಲಾಧಿಕಾರಿಯೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.