ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ ಕೈ ಜೋಡಿಸಿರುವುದು ತುಂಬಾ ತೃಪ್ತಿದಾಯಕವಾಗಿದೆ. ಈ ನಶೆ ಎಂಬುದು ಅನಾದಿ ಕಾಲದಿಂದಲೂ ನಮ್ಮ ಜತೆಗಿರುವ ಸಂಗತಿ. ಇದನ್ನು ಹಿತ ಮಿತದಿಂದ ಸನ್ಯಾಸಿಗಳು ಬಳಸುತ್ತಿದ್ದರು. ಆದರೆ ಪ್ರಸ್ತುತದಲ್ಲಿ ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ ಎಂದು ಗಾಂಧಿವಾದಿ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ನಗರದಲ್ಲಿ ಹಮ್ಮಿಕೊಂಡಿದ್ದ ʼಡ್ರಗ್ಸ್ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಯಂತ್ರ ನಾಗರಿಕತೆಯ ಒಂದು ಲಕ್ಷಣ, ವೇಗ ಆವೇಗ, ಹಿಂಸೆ, ಅಸಮಾಧಾನ ಅಸಹನೆ ಎಲ್ಲವನ್ನೂ ಮೀರಲು ಮಾದಕತೆಗೆ ವಾಲುತ್ತಿದ್ದಾರೆ. ಮೊಬೈಲ್ ಬಳಕೆ ಕೂಡ ಒಂದು ಮಾದಕತೆ. ಬದುಕನ್ನು ಸಂಭ್ರಮಿಸಬೇಕಾದರೆ ಮಕ್ಕಳ ಹಿತರಕ್ಷಣೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗ್ರತರಾಗಬೇಕು. ಚಳವಳಿಗಾರರು ಮುನ್ನುಗ್ಗಬೇಕು, ಮನೆಯಲ್ಲಿ ಪೋಷಕರೂ ಕೂಡ ಮಕ್ಕಳಿಗೆ ಹೆಚ್ಚು ಸಮಯ ಕೊಡುವ ಮೂಲಕ ಅವರೊಟ್ಟಿಗೆ ತೊಡಗಿಸಿಕೊಳ್ಳಬೇಕು. ಎಲ್ಲ ಧರ್ಮಗಳೂ ಕೂಡ ವ್ಯಸನ ಮುಕ್ತವಾಗಿರುವುದನ್ನೇ ಬೋಧಿಸುತ್ತವೆ” ಎಂದು ಹೇಳಿದರು.
ದೇವರನ್ನು ಪೀಠದಿಂದ ಕೆಳಗಿಟ್ಟು, ಅಮಲನ್ನು ಪೀಠದ ಮೇಲೆ ಕೂರಿಸಿದ್ದೇವೆ. ದೇವರು ದೇವರಾದರೆ, ಡ್ರಗ್ಸ್ ಒಂದು ಸೈತಾನ್ ಇದ್ದಂತೆ. ಎಲ್ಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು, ಸಾರ್ವಜನಿಕರು ಎಚ್ಚೆತ್ತುಕೊಂಡು ಡ್ರಗ್ಸ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್ ಕಾಕಡೆ
ಅತಿಥಿಗಳು ಉಪವಿಭಾಗಾಧಿಕಾರಿ ಎಚ್ ಡಿ ರಾಜೇಶ್, ತಹಶೀಲ್ದಾರ್ ಸುಪ್ರೀತ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಧರ್ಮಸ್ಥಳ ನಶಾ ಮುಕ್ತ ಕೇಂದ್ರದ ಡಾ. ನವೀನ್ ಚಂದ್ರಶೇಕರ್ ಸೇರಿದಂತೆ ಬಹುತೇಕ ಸ್ಥಳೀಯರು ಇದ್ದರು. ಪತ್ರಕರ್ತ ಮಲ್ನಾಡ್ ಮೆಹಬೂಬ್ ಸ್ವಾಗತಿಸಿದರು. ಜೈ ಭೀಮ್ ಮಂಜು ಕಾರ್ಯಕ್ರಮ ನಿರೂಪಣೆ ಮಾಡಿದರು.