ಸಮಗಾರ ಸಮುದಾಯ ಎಂದಾಗ ನೆನಪಿಗೆ ಬರುವುದು ಶರಣ ಸಮಗಾರ ಹರಳಯ್ಯನವರು. ಹರಳಯ್ಯ ಅವರು ಬಸವಣ್ಣನವರರಿಗೆ ಶರಣು ಎಂದರೆ, ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಹರಳ್ಳಯನವರೆ ಎನ್ನುತ್ತಿದ್ದರು. ಇದಂರಿಂದ ಹರಳಯ್ಯನವರಿಗೆ ಗರಬಡಿಂತಾಗಿ, ‘ಪ್ರಪಂಚವೇ ಜಗದ್ಗುರು, ಭಕ್ತಿ ಭಂಡಾರಿ, ಅಣ್ಣ ಬಸವಣ್ಣ ಎಂದು ಕರೆಯುವಂತಹ ನಮ್ಮ ಕಲ್ಯಾಣದ ಪ್ರಧಾನಿ ಹಾಗೂ ದಿನ ನಿತ್ಯ 1.96 ಲಕ್ಷ ಶರಣರಿಗೆ ದಾಸೋಹ ಮಾಡುತ್ತಿರುವ ಬಸವಣ್ಣನವರು ನನ್ನಂತಹ ಸಾಮಾನ್ಯನಿಗೆ ಎರಡು ಸಲ ಶರಣು ಎಂದರಲ್ಲಾ ಈ ಹೊರೆಯನ್ನು ಹೇಗೆ ಕಡಿಮೆಮಾಡಿಕೊಳ್ಳಲಿ’ ಎಂಬ ಚಿಂತೆಯಲ್ಲಿದ್ದರು. ಆಗ, ಶರಣೆ ಕಲ್ಯಾಣಮ್ಮರ ವಿಚಾರದಂತೆ ದಂಪತಿಗಳಿಬ್ಬರು ತಮ್ಮ ತೊಡೆಯ ಚರ್ಮದಿಂದ ತಯಾರಿಸಿದ ಚಮ್ಮಾವುಗೆಗಳನ್ನು ಬಸವಣ್ಣನವರಿಗೆ ನೀಡಲು ತೆರಳಿದ್ದರು. ಬಸವಣ್ಣನವರು ‘ಈ ಶರಣರ ಚಮ್ಮಾವುಗೆ ಪೃಥ್ವಿ ಸಮಾಬಾರದು ಸರಿಯಲ್ಲ ನೋಡಾ ಈ ಚಮ್ಮಾವುಗೆಗಳನ್ನು ತೊಡಲು ನಾನು ಯೋಗ್ಯನಲ್ಲ’ ಎಂದು ಕಳುಹಿಸಿಕೊಡುತ್ತಾರೆ.
ಇಂತಹ ಅಪರೂಪದ ಮತ್ತು ಸತ್ಯ ಶುದ್ಧದಿ ಕಾಯಕ ಮಾಡುವ ಸಮಗಾರ ಸಮುದಾಯವು ಇಂದು ಆರ್ಥಿಕ ಸಂಕಷ್ಟದಲ್ಲಿದೆ. ಆಧುನಿಕರಣದ ಭರಾಟೆಯಲ್ಲಿ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುವವರ ಸಂಖ್ಯೆಯು ಕಡಿಮೆಯಾಗಿದೆ. ಚಮ್ಮಾರಿಕೆ ಕುಲಕಸುಬು ನಂಬಿಕೊಂಡು ಬದುಕುತ್ತಿರುವ ಬಡ ಕುಟುಂಬಗಳ ಬದುಕು ಆಧುನಿಕತೆಯ ಹೊಡೆತಕ್ಕೆ ನಲುಗಿ ಹೋಗಿದೆ. ಹೊಸ ಶೈಲಿಯ ವಿವಿಧ ನಮೂನೆಯ ಚಪ್ಪಲಿಗಳನ್ನು ಶೋರೂಂ ಅಂಗಡಿಗಳಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಸುವ ಜನ, ಅದೇ ಚಪ್ಪಲಿ ಹರಿದು ಹೋದಾಗ ಚಮ್ಮಾರರ ಹತ್ತಿರ ಹೊಲಿಸಿಕೊಳ್ಳಲು ಬರುತ್ತಾರೆ. ಒಂದೆರಡು ರೂಪಾಯಿಗೂ ಚೌಕಾಸಿ ಮಾಡುತ್ತಾರೆ. ಬೂಟುಗಳನ್ನು ಪಾಲಿಸು ಮಾಡಿ ಹೊಳೆಯುವಂತೆ ಮಾಡುವ ಈ ಚಮ್ಮಾರರ ಬದುಕು ಮಾತ್ರ ಇಂದಿಗೂ ಮಸುಕಾಗಿದೆ.
ಚಮ್ಮಾರ/ಸಮಗಾರ ಸಮುದಾಯ ತಯಾರಿಸಿದ ಚರ್ಮದ ಚಪ್ಪಲಿಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಬೀದಿ ಬದಿಗಳಲ್ಲಿ ಹರಿದ ಚಪ್ಪಲಿಗಳನ್ನು ಸರಿ ಮಾಡುವ ಕಾಯಕದಿಂದಲೇ ಅನೇಕ ಕುಟುಂಬಗಳು ಇಂದಿಗೂ ಜೀವನ ನಡೆಸುತ್ತಿವೆ.
ತಮ್ಮ ಸಂಕಷ್ಟಗಳ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಚಮ್ಮಾರಿಕೆ ಕೆಲಸ ಮಾಡುವ ಹನಮಂತ ಸಮಗಾರ, “ಸುಮಾರು 30 ವರ್ಷಗಳಿಂದ ಚಪ್ಪಲಿ ಹೊಲಿಯುವ ಕಾಯಕ ಮಾಡಿಕೊಂಡು ಬಂದಿದ್ದೇವೆ. ಮುಂಜಾನೆಯಿಂದ ಸಂಜೆಯವರೆಗೆ ದುಡಿದರೂ 200 ರೂಪಾಯಿ ಸಿಗುವುದು ಕಷ್ಟ. ಇದರ ಮಧ್ಯೆ ಜನರು ಒಂದೆರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತಾರೆ. ಆದರೂ ಬದುಕಿನ ಬಂಡಿ ಸಾಗಿಸಬೇಕಲ್ಲ. ಬೇರೆ ಕೆಲಸ ಗೊತ್ತಿಲ್ಲ. ಈ ಉದ್ಯೋಗ ಮಾಡಿಕೊಂಡೆ ಜೀವನಾ ಮಾಡ್ತಿದ್ದಿವಿ” ಎಂದರು.
“ನಮ್ಮ ಸಮುದಾಯವು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಸಹ ಕಷ್ಟವಿದೆ. ನನ್ನ ಸ್ವಂತ ಮಗ ತಾನೆ ಸ್ವತಃ ದುಡಿದು ಮುಂಜಾನೆ ಪೇಪರ್ ಹಾಕಿ, ನಂತರ ಬೀದಿ ಬೀದಿ ಐಸ್ಕ್ರೀಂ ಮಾರಾಟ ಮಾಡಿ ಪಿಯುಸಿ ಶಿಕ್ಷಣ ಪಡೆದಿದ್ದಾನೆ. ಆದರೆ, ಮುಂದೆ ಕಲಿಸುವುದು ಸಾಧ್ಯವಾಗಲಿಲ್ಲ. ಹೊಟ್ಟೆ ತುಂಬಿಸಿ ಕೊಳ್ಳುವುದು ಕಷ್ಟವಾಗಿದೆ. ಇನ್ನೂ ಶಿಕ್ಷಣ ಹೇಗೆ ಕಲಿಸೋದು. ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಇದುವರೆಗೆ ನಮ್ಮ ಸಮುದಾಯದ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಸರ್ಕಾರದಿಂದ ಬರುವ ರೇಷನ್ ಅಕ್ಕಿ ನಮ್ಮ ಹೊಟ್ಟೆ ತುಂಬಿಸುತ್ತಿದೆ” ಎಂದು ತಮ್ಮ ನೋವನ್ನು ತೋಡಿಕೊಂಡರು.
ಸಮಗಾರ, ಚಮ್ಮಾರ, ಮೋಚಿ, ಮೋಚಿಗಾರ, ಚಾಂಬಾರ್, ಚಂಬಾಗ ಹೀಗೆ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಕೊಲ್ಲಾಪುರದ ಚರ್ಮದ ಚಪ್ಪಲಿಗಳು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಚಪ್ಪಲಿಗಳನ್ನು ತಯಾರಿಸುವವರು ನಮ್ಮ ಕರ್ನಾಟಕದ ಸಮಗಾರ ಸಮುದಾಯದವರೇ ಆಗಿದ್ದಾರೆ.
ಬೀದಿ ಬದಿಯಲ್ಲಿ ಚಪ್ಪಲಿ ತಯಾರಿಸುವ, ಹೊಲಿಯುವ ಕಾಯಕ ಮಾಡುವ ಸಮಗಾರ ಸಮುದಾಯದ ಜನರಿಗೆ ಸರ್ಕಾರವು ಆರ್ಥಿಕ ಸಹಾಯ ನೀಡಬೇಕಿದೆ. ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಚರ್ಮದ ಕುಟೀರಗಳನ್ನು ಬಡ ಚಮ್ಮಾರರಿಗೆ ಉಚಿತವಾಗಿ ನೀಡಬೇಕಾಗಿದೆ. ಆಧುನಿಕತೆಯ ಸಂದರ್ಭದಲ್ಲಿ ಚರ್ಮ ತಯಾರಿಕೆಯ ತರಬೇತಿ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸಿ ಸಮಗಾರರ ಬದುಕಿಗೆ ಬೆಳಕಾಗಬೇಕಿದೆ. 12ನೇಯ ಶತಮಾನದಲ್ಲಿ ಬಸವಣ್ಣನವರು ಶರಣ ಹರಳಯ್ಯನವರು ತಯಾರಿಸಿದ ಚಮ್ಮಾವುಗೆಗಳು ಪೃಥ್ವಿ ಸಮಬಾರದು ಸರಿಯಲ್ಲ ನೋಡಾ ಎಂದು ಗೌರವಿಸಿದ್ದರು. ಇಂತಹ ಸಮಗಾರ ಸುಮುದಾಯವು ಇಂದು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದೆ. ಸರ್ಕಾರವು ಇನ್ನಾದರೂ ಸಮಗಾರ ಸುಮುದಾಯದ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕಿದೆ.
Sarakarada Kannu tereyabekagide. Ellaru ottige Koodi sarakarakke Manavi Madabeku
ಜನಪ್ರತಿನಿಧಿಗಳು ಮತ್ತು ಸರ್ಕಾರ ಸಹಾಯಕ್ಕೆ ಬರಬೇಕಿದೆ ಅದಕ್ಕಾಗಿ ರಾಜ್ಯದ ಎಲ್ಲ ಸಮಗಾರ ಸಮುದಾಯದವರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿದೆ