ಸಾಂಸ್ಕೃತಿಕ ಸಂವಿಧಾನ ಪರಿಷೆ ಅಭಿಯಾನದಲ್ಲಿ ಎನ್ ವೆಂಕಟೇಶ್ ಅಭಿಪ್ರಾಯ
ಇಂದಿನ ಯುವಜನರು ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಪೀಠಿಕೆಯಲ್ಲಿರುವ ಸ್ವಾತಂತ್ರ‍್ಯ, ಸಮತೆ, ಸಮಾನತೆ, ಸಹೋದರತ್ವ, ಭಾತೃತ್ವ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಹೀಗೆ ಹಲವಾರು ಸಂಗತಿಗಳ ಬಗ್ಗೆ ತಿಳಿಯಬೇಕು. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ನಾವು ಅಧ್ಯಯನ ಮಾಡಬೇಕು. ಆ ಮೂಲಕ ಸಂವಿಧಾನದಲ್ಲಿ ಈ ಅಂಶಗಳನ್ನು ಯಾಕೆ ಸೇರಿಸಲಾಗಿದೆ ಎಂಬುದನ್ನು ವಿಮರ್ಶೆ ಮಾಡಬೇಕಿದೆ ಎಂದು ಹಿರಿಯ ಹೋರಾಟಗಾರ ಎನ್.ವೆಂಕಟೇಶ್ ಹೇಳಿದರು.
ಚಿಂತಾಮಣಿ ನಗರದ ಜನಪರ ಫೌಂಡೇಶನ್ ಕಚೇರಿಯಲ್ಲಿ ಬೇರು ಬೆವರು ಕಲಾ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಸಂವಿಧಾನ ಪರಿಷೆ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಶೂದ್ರರು, ಹಿಂದುಳಿದ ವರ್ಗದ ಜನರಿಗೆ ಶಿಕ್ಷಣದ ಹಕ್ಕಿರಲಿಲ್ಲ. ಮಹಿಳೆಯರಿಗೆ ಸೂಕ್ತ ಸ್ಥಾನಮಾನವಿರಲಿಲ್ಲ. ಆದರೆ, ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ಸಂವಿಧಾನ ಜಾರಿಯಾದ ಮೇಲೆ ದುಡಿಯುವ ವರ್ಗ, ಶೋಷಣೆಗೆ ಒಳಗಾದ ಜನರು, ಮಹಿಳೆಯರು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು. ಭಾರತದ ವಿವಿಧ ಸಮುದಾಯಗಳು, ಧರ್ಮಗಳು, ಹಲವು ಭಾಷಿಕರಿರುವ ಜನರು, ಭಿನ್ನ ಸಂಸ್ಕೃತಿ ಹೊಂದಿರುವವರು, ಜಾತಿಗಳು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದ್ದು ಅಂಬೇಡ್ಕರ್ ಅವರ ಶ್ರಮ ಮತ್ತು ಭಾರತದ ಸಂವಿಧಾನ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ : ಕೇಂದ್ರದ ಯೋಜನೆಗಳಿಗೆ ಬಾಗೇಪಲ್ಲಿ ತಾಲೂಕಿನಲ್ಲಿ ಎಳ್ಳು ನೀರು?
ಪ್ರಸ್ತುತ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿ ಅನೇಕರು ಹೇಳಿಕೆಗಳನ್ನು ಸಹ ನೀಡುತ್ತಿರುವುದನ್ನು ಕಂಡಿದ್ದೇವೆ ಹಾಗೂ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಯುವಜನರು ಎಚ್ಚೆತ್ತಿಕೊಳ್ಳಬೇಕು. ಜನಸಾಮಾನ್ಯರಿಗೆ, ಯುವಜನತೆಗೆ ರಾಜಕೀಯ ಬಣ್ಣವಿಲ್ಲದ ಸಂವಿಧಾನದ ಓದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಈ ಸಾಂಸ್ಕೃತಿಕ ಸಂವಿಧಾನ ಪರಿಷೆ ಬಹಳ ಭಿನ್ನವಾಗಿದೆ. ಇಂತಹ ಅಭಿಯಾನಗಳು ಇನ್ನಷ್ಟು ಹೆಚ್ಚಲಿ, ಸಂವಿಧಾನದ ಆಶಯಗಳು ಜೀವಂತವಾಗಿ ಉಳಿಯಲಿ ಎಂದು ಅವರು ಆಶಿಸಿದರು.
ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಅವರು ಮಾತನಾಡಿ, ಸಂವಿಧಾನ ಎಲ್ಲರದ್ದಾಗಿದೆ. ಅದನ್ನು ನಾವೆಲ್ಲರೂ ಸಂಭ್ರಮಿಸಬೇಕು. ಈ ಹಿನ್ನೆಲೆಯಲ್ಲಿ ಹಲವು ಜನಪರ ಬರಹಗಾರರು, ಗೀತ ರಚನಾಕಾರರು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಾಡುಗಾರರು, ವಾದ್ಯಗಾರರು, ನಾಟಕಕಾರರು, ರಂಗಕರ್ಮಿಗಳು, ಯಕ್ಷಗಾನ ಕಲಾವಿದರು, ನೃತ್ಯಗಾರರು ಹೀಗೆ ವಿವಿಧ ವಲಯದ ಎಲ್ಲರೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ ಸಂವಿಧಾನವನ್ನು ತಲುಪಿಸುವ ನಿಟ್ಟಿನಲ್ಲಿ “ಸಾಂಸ್ಕೃತಿಕ ಸಂವಿಧಾನ ಪರಿಷೆ” ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಿಂದ ಅವಕಾಶಗಳು ದೊರೆಯುತ್ತಿವೆ. ಆದರೆ, ಎಲ್ಲರಿಗೂ ಸಂವಿಧಾನದ ಆಶಯಗಳು ಇಂದಿಗೂ ಅರ್ಥವಾಗದಿರುವುದು ದುರಂತ. ಹಳ್ಳಿಯಿಂದ ದಿಲ್ಲಿಯ ತನಕ ಸಂವಿಧಾನದ ಆಶಯಗಳನ್ನು ವಿಸ್ತರಿಸಬೇಕಿದೆ. ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಸಂವಿಧಾನದ ಪರಿಷೆಯನ್ನು ಮುನ್ನಡೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್ ಹಾಗೂ ಮುನಿರಾಜು ಅವರು ಸಂವಿಧಾನ ಕುರಿತಾದ ಹಾಡುಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೋದಿ-ಅದಾನಿಗಳನ್ನು ಅಣಕಿಸುವುದಲ್ಲ; ಬಿಚ್ಚಿಟ್ಟು ಬಹಿರಂಗಗೊಳಿಸಬೇಕಿದೆ
ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರಾದ ನಾರವಮಾಕಲಹಳ್ಳಿ ಮುನಿರೆಡ್ಡಿ, ದಸಂಸ ತಾಲ್ಲೂಕು ಸಂಚಾಲಕರಾದ ಶ್ರೀರಂಗಪ್ಪ, ಜನಪರ ಫೌಂಡೇಷನ್ ನ ಗಾಯತ್ರಿ, ಬಾಬುರೆಡ್ಡಿ, ಸಿರಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.