ಸಂಯುಕ್ತ ಹೋರಾಟ ಕರ್ನಾಟಕ ಉಡುಪಿ ಜಿಲ್ಲೆ, ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಜಿಲ್ಲಾ ಸಂಚಾಲನ ಸಮಿತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿಯಲ್ಲಿ ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಶ್ರೀ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು ತಕ್ಷಣ ಕೇಂದ್ರ ಸರಕಾರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಮತ್ತು ಪ್ರಮುಖ 7 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ, ಧರಣಿ ನಡೆಸಲು ಕರೆ ನೀಡಿದ್ದು
ಉಡುಪಿಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿಗಳಿಗೆ ಹಾಗೂ ಪ್ರಧಾನ ಮಂತ್ರಿ ಯವರಿಗೆ ಮನವಿ ನೀಡಲಾಯಿತು.
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 26 ರಿಂದ ಪಂಜಾಬ್- ಹರ್ಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಗ ವಯಸ್ಸಿನ ಶ್ರೀ ಜಗಜಿತ್ ಸಿಂಗ್ ದಲ್ಲೇವಾಲ ರವರು ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ.
ಈ ಉಪವಾಸ ಸತ್ಯಾಗ್ರಹ 48 ನೇ ದಿನಕ್ಕೆ ಕಾಲಿಟ್ಟಿದ್ದು, ದೇಹ ನಿತ್ರಾಣಗೊಂಡು .ಮಾಂಸಖಂಡಗಳು ತಮ್ಮ ತೂಕವನ್ನು ಕಳೆದುಕೊಂಡಿದ್ದು ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ಇಂತಹ ಸ್ಥಿತಿಗೆ ರೈತ ನಾಯಕರ ಪರಿಸ್ಥಿತಿ ತಲುಪಲು ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ ಕನಿಷ್ಟ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿ ಕೇಂದ್ರ ಸರ್ಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಅಖಿತ ಭರವಸೆಯನ್ನು ನೀಡಿತ್ತು. ಆದರೆ ಈ ಭರವಸೆಗೆ ವಿರುದ್ದವಾಗಿ ನಡೆದುಕೊಂಡ ಕಾರಣಕ್ಕಾಗಿ ಎರಡನೇ ಎನ್ ಡಿ ಎ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಮತ್ತೇ ಅದೇ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಡುಪಿ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ್, ರೈತ ಸಂಘದ ಮುಖಂಡರಾದ ಅನಿಲ್ ಬಾರ್ಕೂರ್, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಮುಖಂಡರಾದ ವೆಂಕಟೇಶ್ ಕೋಣಿ, ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಮುಂಡರಾದ ಉಮೇಶ್ ಕುಂದ್, ನಳಿನಿ ಹಾಗೂ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
