ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳ ಗುಂಪು ಮಂಗಳೂರಿನ ಬಜಪೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆಗೈದ ಬೆನ್ನಲ್ಲೇ ಮುಸ್ಲಿಮರು ಪ್ರಯಾಣಿಸುತ್ತಿದ್ದ ಆಟೋವೊಂದರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮುಗಿಬಿದ್ದು ದಾಂಧಲೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ನಡೆದಿದೆ.
ಸುಹಾಸ್ ಶೆಟ್ಟಿ ಅವರ ಶರೀರವನ್ನು ಮಂಗಳೂರಿನ ಏ.ಜೆ. ಆಸ್ಪತ್ರೆಯಿಂದ ಅವರ ಹುಟ್ಟೂರಾದ ಬಂಟ್ವಾಳ ತಾಲೂಕಿನ ಕಾರಿಂಜಕ್ಕೆ ಪೊಲೀಸ್ ಬಂದೋಬಸ್ತಿನಲ್ಲಿ ಕೊಂಡೊಯ್ಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಸುಹಾಸ್ ಶೆಟ್ಟಿಯವರ ಮೃತದೇಹದ ಅಂತಿಮ ದರ್ಶನಕ್ಕೆಂದು ಬಿ.ಸಿ.ರೋಡಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ರಸ್ತೆ ಬದಿಯಲ್ಲಿ ಕಾಯುತ್ತಿದ್ದರು. ಈ ನಡುವೆ ಬೀಡಿಯ ಕಟ್ಟನ್ನು ತುಂಬಿಕೊಂಡು ಮೂರು ಮಂದಿ ಮುಸ್ಲಿಂ ಬೀಡಿ ವ್ಯಾಪಾರಸ್ಥರು ತುಂಬೆಯಿಂದ ಪಾಣೆಮಂಗಳೂರು ಕಡೆಗೆ ರಸ್ತೆ ಬದಿ ನಿಂತಿದ್ದ ಸಂಘಪರಿವಾರದ ಕಾರ್ಯಕರ್ತರ ನಡುವೆಯೇ ಸಾಗುತ್ತಿದ್ದರು.

ಮುಸ್ಲಿಂ ವ್ಯಾಪಾರಸ್ಥರು ಶುಕ್ರವಾರವಾದ್ದರಿಂದ ಬಿಳಿ ಅಂಗಿ, ಪಂಚೆ ಧರಿಸಿದ್ದನ್ನು ಗಮನಿಸಿದ ಕೆಲವು ಕಿಡಿಗೇಡಿಗಳು, ಆಟೋ ರಿಕ್ಷಾದ ಮೇಲೆ ಮುಗಿಬಿದ್ದಿದ್ದಾರೆ. ಒಬ್ಬಾತ ಎದುರಿನಿಂದ ತನ್ನ ಕೈ ಪ್ರಯೋಗಿಸಿ ರಿಕ್ಷಾದ ಮುಂದಿನ ಗಾಜನ್ನು ಒಡೆದು ಹಾಕಿದ್ದಾನೆ. ಇನ್ನು ಕೆಲವರು ಹಿಂಬದಿಯಿಂದ ದಾಳಿ ನಡೆಸಿದ್ದಾರೆ. ಇದನ್ನು ಕೂಡಲೇ ಗಮನಿಸಿದ ಘಟನಾ ಸ್ಥಳದಲ್ಲಿ ಬಂದೋಬಸ್ತಿನಲ್ಲಿದ್ದ ಕೆಲವು ಪೊಲೀಸ್ ಅಧಿಕಾರಿಗಳು, ರಿಕ್ಷಾದಲ್ಲಿದ್ದವರಿಗೆ ಹಲ್ಲೆ ನಡೆಸುವುದನ್ನು ತಪ್ಪಿಸಿದ್ದಾರೆ.
ಸಂಘಪರಿವಾರದ ಕಿಡಿಗೇಡಿಗಳ ದಾಂಧಲೆಯಿಂದ ರಿಕ್ಷಾದ ಮುಂಭಾಗದ ಗಾಜು ಹಾಗೂ ಹಿಂಬದಿಯ ಟಾಪ್ ಕವರನ್ನು ಹರಿದು ಹಾಕಿದ್ದಾರೆ. ಅಲ್ಲದೇ, ಮೂವರು ವ್ಯಾಪಾರಿಗಳ ಪೈಕಿ ಓರ್ವ ವೃದ್ಧ ವ್ಯಾಪಾರಸ್ಥರಿಗೆ ಕಾಲಿನಿಂದ ಒದ್ದಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಬೊಬ್ಬೆ ಹೊಡೆದು ಮುಸ್ಲಿಂ ಮೀನು ವ್ಯಾಪಾರಿಯನ್ನು ದುಷ್ಕರ್ಮಿಗಳಿಂದ ಕಾಪಾಡಿದ ಹಿಂದೂ ಮಹಿಳೆ
ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ರಿಕ್ಷಾ ಚಾಲಕರು, “ನಾವು ನಮ್ಮಷ್ಟಕ್ಕೆ ತುಂಬೆಯಿಂದ ಪಾಣೆಮಂಗಳೂರು ಕಡೆಗೆ ಬೀಡಿಯ ಕಟ್ಟನ್ನು ತುಂಬಿಕೊಂಡು ಬರುತ್ತಿದ್ದೆವು. ರಸ್ತೆ ಬದಿಯಲ್ಲಿ ನಿಂತಿದ್ದವರು ಒಮ್ಮೆಲೆ ರಿಕ್ಷಾದ ಮೇಲೆ ಮುಗಿಬಿದ್ದಿದ್ದಾರೆ. ರಿಕ್ಷಾದಲ್ಲಿದ್ದ ವೃದ್ಧ ವ್ಯಾಪಾರಿಗೆ ಕಾಲಿನಲ್ಲಿ ತುಳಿದಿದ್ದಾರೆ. ನನ್ನ ರಿಕ್ಷಾದ ಮುಂಭಾಗದ ಗಾಜು ಹಾಗೂ ಹಿಂಬದಿಯ ಟಾಪ್ ಕವರನ್ನು ಹರಿದು ಹಾಕಿದ್ದಾರೆ” ಎಂದು ತಿಳಿಸಿದರು.

ರಿಕ್ಷಾದಲ್ಲಿ ಮುಸ್ಲಿಂ ಮಹಿಳೆಯರು ಇದ್ದರು ಎಂಬ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ “ಇಲ್ಲ. ನಮ್ಮ ರಿಕ್ಷಾದಲ್ಲಿ ಮಹಿಳೆಯರು ಇರಲಿಲ್ಲ. ಮೂವರು ಬೀಡಿ ವ್ಯಾಪಾರಸ್ಥರು ಹಾಗೂ ನಾನು ಸೇರಿ 4 ಮಂದಿ ಇದ್ದೇವಷ್ಟೇ” ಎಂದು ರಿಕ್ಷಾ ಚಾಲಕ ಈದಿನ ಡಾಟ್ ಕಾಮ್‌ಗೆ ಸ್ಪಷ್ಟನೆ ನೀಡಿದ್ದಾರೆ.
