ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಆಯೋಜಿಸಿದ ಸರಸ್ವತಿ ಪೂಜೆಗೆ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ಫೆ.14ರಂದು ವಸಂತ ಪಂಚಮಿ ಹಿನ್ನಲೆ ಗ್ರಂಥಾಲಯದಲ್ಲಿರುವ ಸರಸ್ವತಿ ಮೂರ್ತಿಗೆ ಅಲಂಕರಿಸಿ ಪೂಜೆಗೆ ತಯಾರಿಸಲಾಗಿತ್ತು. ವಿವಿಯ ಕುಲಪತಿ ಸೇರಿದಂತೆ ಕೆಲ ವಿದ್ಯಾರ್ಥಿಗಳು, ಸಿಬ್ಬಂದಿಗಳು ಈ ಪೂಜೆಯಲ್ಲಿ ಭಾಗವಹಿಸಿದರು. ಈ ವೇಳೆ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ನೇತ್ರತ್ವದಲ್ಲಿ ವಿವಿಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ವಿರೋಧಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಮಾತನಾಡಿ, ಗ್ರಂಥಾಲಯದಲ್ಲಿ ಸರಸ್ವತಿ ಪೂಜೆ, ಮಂತ್ರ ಪಠಣ ನಡೆಸಲು ಇದು ದೇವಸ್ಥಾನವೋ, ಧರ್ಮ ಕ್ಷೇತ್ರವೋ? ಇದೆಲ್ಲ ಮಾಡಲು ಅಧಿಕಾರ ಕೊಟ್ಟವರು ಯಾರು? ಮನಸ್ಸಿಗೆ ಬಂದಂತೆ ಪೂಜೆ ಮಾಡುವುದಾದರೆ ಗುಡಿಗೆ ಹೋಗಿ ಗಂಟೆ ಬಾರಿಸುತ್ತ ಕುಳಿತುಕೊಳ್ಳಿ ಇಲ್ಲೇಕೆ ಬಂದಿರಿ” ಎಂದು ಗ್ರಂಥಾಲಯ ಮುಖ್ಯಸ್ಥ ಪರಶುರಾಮ ಕಟ್ಟಿಮನಿ ಅವರೊಂದಿಗೆ ವಾಗ್ವಾದ ನಡೆಸಿದರು. ಇದಕ್ಕೆ “ವಸಂತ ಪಂಚಮಿ ಎನ್ನುವ ಕಾರಣಕ್ಕೆ ಆಚರಣೆ ನಡೆಸುತ್ತಿದ್ದಾರೆ, ಇದೆಲ್ಲ ನಮಗೆ ಕೇಳಬೇಡಿ” ಗ್ರಂಥಾಲಯ ಮುಖ್ಯಸ್ಥರು ಪ್ರತಿಕ್ರಿಯಿಸಿದರು.
ಈ ಕುರಿತು ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಈದಿನ.ಕಾಮ್ ಜೊತೆಗೆ ಮಾತನಾಡಿ, “ಬುದ್ದ, ಬಸವ ಅಂಬೇಡ್ಕರ್ ತತ್ವಸಿದ್ಧಾಂತ ಸೇರಿದಂತೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಂಬಿಕೆಯಿಟ್ಟು ಸಂವಿಧಾನವನ್ನು ಗೌರವಿಸುವ ನಮಗೆ ಅಂಬೇಡ್ಕರ್, ಬಸವಣ್ಣನವರ ಪೋಟೊಗೆ ಹೂವಿನ ಮಾಲೆ ಹಾಕಲು ಅನುಮತಿ ನೀಡದ ಇವರು ತಮ್ಮ ಇಚ್ಚೆಯಂತೆ ವಿಶ್ವವಿದ್ಯಾಲಯದಲ್ಲಿ ಧಾರ್ಮಿಕ ಆಚರಣೆಗಳು ಮಾಡುತ್ತಾರೆ” ಎಂದು ಆಕ್ಷೇಪಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎರಡು ವರ್ಷದ ಮಗಳ ಕೊಂದು, ತಾಯಿ ಆತ್ಮಹತ್ಯೆ
ಇದನ್ನು ವಿದ್ಯಾರ್ಥಿ ನಂದಕುಮಾರ್ ಅವರು ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿದ್ದಾರೆ. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.