ಆಹರ್ನಿಶಿ ಪ್ರಕಾಶನ ಪ್ರಕಟಿಸಿದ ನವೀನ್ ಸೂರಿಂಜಿರವರು ಬರೆದ ಸತ್ಯೊಲು ಪುಸ್ತಕ ಇಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆಯಾಯಿತು.
ಖ್ಯಾತ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿ, ಪುಸ್ತಕದ ಕರ್ತೃ ನವೀನ್ ಸೂರಿಂಜೆಯವರ ತಂದೆ ತಾಯಿಗೆ ಪುಸ್ತಕದ ಪ್ರತಿಯನ್ನು ನೀಡುವ ಮೂಲಕ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಜನಪದ ಸಂಶೋಧಕರಾದ ಡಾ. ಗಣನಾಥ ಎಕ್ಕಾರು ರವರು ಪುಸ್ತಕದ ಬಗ್ಗೆ ಮಾತನಾಡುತ್ತ, ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಬಹಳಷ್ಟು ಮಹತ್ವ ಇದೆ, ದೈವಾರಾಧನೆ ಏನು, ಯಾಕೆ, ಹಿಂದಿನ ದೈವಾರಾಧನೆಗೂ ಇಂದಿನ ದೈವಾರಾಧನೆಗೂ ಬಗೆಗಿನ ವ್ಯತ್ಯಾಸವನ್ನು ಬಹಳಷ್ಟು ಮಾರ್ಮಿಕವಾಗಿ ನವೀನ್ ಸೂರಿಂಜೆಯವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ನೆಲದ ಮೂಲ ನಿವಾಸಿಗಳು ಆರಾಧಿಸುತ್ತಿದ್ದ ಅವೈದಿಕವಲ್ಲದ ಭೂತ ಕೋಲವನ್ನು ಇಂದು ಇಲ್ಲಿನ ವೈದಿಕಶಾಹಿಗಳು ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ. ಸಾಮರಸ್ಯ, ಸೌಹಾರ್ದತೆ ಸಾರುವ ಈ ನೆಲದ ದಲಿತರ ಶೋಷಿತರ ದಮನಿತರ ದೈವಾರಾಧನೆಯನ್ನು ಇಂದು ಕೋಮುದೃವೀಕರಿಸಿದ್ದಾರೆ ಅದನ್ನು ಒತ್ತಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಕರಾವಳಿಯ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ, ಭೂತ ಕೋಲ, ಸೌಹಾರ್ದತೆಯನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಕೃಷ್ಣಾನಂದ ಡಿ ವಹಿಸಿದ್ದರು. ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೋಳಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಪತ್ರಕರ್ತರಾದ ಇರ್ಷಾದ್ ಉಪ್ಪಿನಂಗಡಿಯವರು ಮಾತನಾಡಿದರು. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದ ಕಟ್ಟೆ, ಲೇಖಕ ನವೀನ್ ಸೂರಿಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.