2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟ ಮತ್ತೆ ಭುಗಿಲೆದ್ದಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ದುರುಳ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಕರಾವಳಿಯಾದ್ಯಂತ ಕೇಳಿಬರುತ್ತಿದೆ. ಸೌಜನ್ಯಗೆ ನ್ಯಾಯ ಸಿಗದೇ ಹೋರಾಟ ನಿಲ್ಲುವುದಿಲ್ಲವೆಂದು ಹೋರಾಟವನ್ನು ಮುನ್ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ. ಅಲ್ಲದೆ, ಅಂದು ದುರುಳರ ಅಟ್ಟಹಾಸಕ್ಕೆ ಬಲಿಯಾಗಬೇಕಿದ್ದದ್ದು ಸೌಜನ್ಯ ಅಲ್ಲ. ಮತ್ತೊಬ್ಬ ಯುವತಿ, ಬ್ರಾಹ್ಮಣ ಕುಟುಂಬದ ವರ್ಷಾ. ಅದೃಷ್ಟವಶಾತ್ ಆ ಹುಡುಗಿ ಈ ಹಂತಕರಿಂದ ಬಚಾವಾಗಿದ್ದಾಳೆ ಎಂದು ಅವರು ಹೇಳಿದ್ದಾರೆ.
“ಧರ್ಮಸ್ಥಳದವರು ವರ್ಷಾಳ ಕುಟುಂಬಕ್ಕೆ ಸೇರಿದ್ದ ಆಸ್ತಿಯನ್ನು ತಮಗೆ ಬಿಟ್ಟುಕೊಡುವಂತೆ ಕೇಳಿದ್ದರು. ಆದರೆ, ಆ ಕುಟುಂಬ ತಮ್ಮ ಆಸ್ತಿಯನ್ನು ಕೊಡಲು ನಿರಾಕರಿಸಿತ್ತು. ಆ ಕುಟುಂಬದ ಮೇಲೆ ದ್ವೇಷ ಸಾಧಿಸಿತ್ತು. ಆ ಕುಟುಂಬದ ಮಗಳು ವರ್ಷಾಳನ್ನು ಅಪಹರಿಸಲು ಈ ದುರುಳ ಹಂತಕರು ಸಂಚು ಹೂಡಿದ್ದರು. ಆದರೆ, ಆಕೆ ಅವರ ಕೈಗೆ ಸಿಗದೆ ಬದುಕುಳಿದಳು” ಎಂದು ಅವರು ತಿಮರೋಡಿ ಆರೋಪಿಸಿದ್ದಾರೆ.
“ಸೌಜನ್ಯ ನಾಪತ್ತೆಯಾದ ಜಾಗದಲ್ಲಿ ಆಕೆ ಅಪಹರಣ ಆಗುವುದಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರನ ಮಗ ನಿಶ್ಚಲ್ ಜೈನ್ ಅವರ ಸ್ನೇಹಿತ ಉದಯ್ ಜೈನ್, ಮಲಿಕ್ ಜೈನ್ ಮತ್ತು ಧೀರಜ್ ಜೈನ್ ಅನುಮಾನಾಸ್ಪದವಾಗಿ ಮಾತನಾಡಿಕೊಳ್ಳುತ್ತಿದ್ದರು. ಅವರು ಸಂಚು ರೂಪಿಸುತ್ತಿರುವಂತೆ ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ, ‘ಸಿಕ್ಕಾಪಟ್ಟೆ ಮಳೆಯಿದೆ. ಇಲ್ಲೇನು ಮಾಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದ. ಅದನ್ನು ನಾನೇ ಕೇಳಿಸಿಕೊಂಡಿದ್ದೇನೆ’ ಎಂದು ಸೌಜನ್ಯಳ ಚಿಕ್ಕಮ್ಮ ಹೇಳಿದ್ದರು. ಅದೇ ದಿನ ಅದೇ ಜಾಗದಲ್ಲಿ ಅವರು ವರ್ಷಾಳನ್ನೂ ಚಪ್ಪಾಳೆ ತಟ್ಟಿ ಕರೆದಿದ್ದರು. ಆದರೆ, ಆಕೆ’ನನಗೆ ಪರೀಕ್ಷೆಯಿದೆ’ ಎಂದೇಳಿ ಹೊರಟು ಹೋಗಿದ್ದಳು. ಇಲ್ಲದಿದ್ದರೆ, ಆ ಹಂತಕರು ವರ್ಷಾಳನ್ನು ಅಪಹರಿಸುತ್ತಿದ್ದರು” ಎಂದು ದೂರಿದ್ದಾರೆ.
ಸೌಜನ್ಯ ಕುಟುಂಬಸ್ಥರೂ ಕೂಡ ಈ ಮೂವರೇ ತಮ್ಮ ಮಗಳನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದಾರೆ ಎಂಬ ಅನುಮಾನವಿದೆ. ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ಈ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸೌಜನ್ಯ ಪ್ರಕರಣ | ಧರ್ಮಸ್ಥಳ ಧರ್ಮಾಧಿಕಾರಿಯ ದರ್ಪ ದೌರ್ಜನ್ಯ ಬಯಲಾಗಿದೆ: ತಿಮರೋಡಿ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್‌ನನ್ನು ಇದೇ ಮಲಿಕ್ ಜೈನ್ ಮತ್ತು ಸಂಗಡಿಗರು ಆರೋಪಿಯೆಂದು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಪೊಲೀಸರು ಆತನಿಗೆ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಳ್ಳುವಂತೆ ಭಯಂಕರ ಹಿಂಸೆ ನೀಡಿದ್ದರು. ಬಳಿಕ, ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ತನಿಖೆ ನಡೆದ ಬಳಿಕ ಸಿಬಿಐ ಕೋರ್ಟ್ ಸಂತೋಷ್‌ನನ್ನು ನಿರಪರಾಧಿ ಎಂದು ಘೋಷಿಸಿದೆ.
ಸಂತೋಷ್ ನಿರಪರಾಧಿ ಆದ ಮೇಲೆ ಹಂತಕರು ಯಾರು ಎಂದು ಪತ್ತೆ ಮಾಡಿ ಶಿಕ್ಷೆ ಕೊಡಬೇಕು. ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಸೌಜನ್ಯ ಕುಟುಂಬ ಒತ್ತಾಯಿಸುತ್ತಿದೆ.