ಖಾಸಗಿ ಶಾಲಾ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಮಂದಿ ಶಾಲಾ ಮಕ್ಕಳು ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಸುಂಕಲಮ್ಮ ದೇವಾಲಯದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಹೇಮಂತ್, ಸುಷ್ಮಿತಾ, ವರ್ಷಿಕಾ, ಸುದೀಪ್, ಹೆಚ್.ಎನ್.ಹಿಮಬಿಂದು, ಸಾನ್ವಿಕಾ, ಲಿಖಿತ, ಶರಣ್ಯ, ಅಶ್ವಿನ್ ಕುಮಾರ್, ಅಶ್ವಿನ್, ತೇಜಸ್, ನಿಹಾನ್ ಅಪಘಾತದಲ್ಲಿ ಗಾಯಗೊಂಡಿರುವ ಸತ್ಯಸಾಯಿ ಶಾಲೆಯ ವಿದ್ಯಾರ್ಥಿಗಳು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಕಡೆಯಿಂದ ಬಂದ ಸತ್ಯಸಾಯಿ ಶಾಲಾ ವಾಹನವು ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿ ಪರಿಣಾಮ ಶಾಲಾ ವಾಹನದಲ್ಲಿದ್ದ ಹತ್ತಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಶಾಲಾ ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಗಾಯಾಳು ಮಕ್ಕಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಇಓ ವೆಂಕಟೇಶಪ್ಪ, ಶಿಕ್ಷಣ ಸಮನ್ವಯಾಧಿಕಾರಿ ಆರ್.ವೆಂಕಟರಾಮ್, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ರಂಗನಾಥ್, ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಈದಿನ ಸಹಾಯವಾಣಿ ಬಿಡುಗಡೆಗೊಳಿಸಿದ ಸಚಿವ ಎಂ.ಸಿ.ಸುಧಾಕರ್
ಸರ್ವೀಸ್ ರಸ್ತೆ ನಿರ್ಮಿಸಲು ಒತ್ತಾಯ : ಘಟನೆಯನ್ನು ಕುರಿತು ಪ್ರತಿಕ್ರಿಯಿಸಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಸೋಮಶೇಖರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಪಕ್ಕದ ಶಾಲೆ, ಗ್ರಾಮಗಳಿಗೆ ಸರ್ವೀಸ್ ರಸ್ತೆ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ ಈ ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ನಿರ್ಲಕ್ಷ್ಯಿಸಲಾಗಿದ್ದು, ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಕೂಡಲೇ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.