ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದ ದನದ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮಾತನಾಡಿ ಕುಂಜಾಲು ಪ್ರಕರಣದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಏಕೆಂದರೆ ಈ ಘಟನೆ ನಡೆದಂತಹ ಸಂದರ್ಭದಲ್ಲಿ ಪೊಲೀಸರು ತನಿಖೆ ನಡೆಸುವುದಕ್ಕಿಂತ ಮುಂಚೆಯೇ ಇದನ್ನು ಒಂದು ಸಮುದಾಯದವರೇ ಮಾಡಿರುವುದು ಎನ್ನುವಂತಹ ರೀತಿಯಲ್ಲಿ ಉಡುಪಿಯ ಶಾಸಕರು ಅಲ್ಲಿಗೆ ಹೋಗಿ ಹೇಳಿಕೆ ನೀಡಿ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವನ್ನು ಮಾಡಿದ್ದರು, ಇದಲ್ಲದೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ನಂತರವೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಗೆ ಬಂದು ಇದರ ಹಿಂದೆ ಮುಸ್ಲಿಮರಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿದ್ದರು.

ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇಂತಹ ಘಟನೆಗಳನ್ನು ನಡೆಸುವ ಮೂಲಕ ಸೌಹಾರ್ದತೆಯನ್ನು ಕೆಡಿಸಿ
ರಾಜಕೀಯ ಲಾಭವನ್ನು ಪಡೆಯುವ ಷಡ್ಯಂತರವೂ ಈ ಘಟನೆ ಹಿಂದೆ ಇರುವಂತೆ ಕಾಣುತ್ತಿದೆ. ಆದ್ದರಿಂದ ಪೊಲೀಸರು ಈ ಘಟನೆ ಪೂರ್ವ ನಿಯೋಜಿತವೇ ಎಂಬ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮುಳೂರು ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಮ್ ಆದಿ ಉಡುಪಿ ಉಪಸ್ಥಿತರಿದ್ದರು.