ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾದ್ಯಂತ ಕರೆ ನೀಡಿದ್ದ ಪ್ರತಿಭಟನೆಗೆ ಚನ್ನಪಟ್ಟಣದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಗುರುವಾರ ಚನ್ನಪಟ್ಟಣ ತಹಸೀಲ್ದಾರ್ ಕಚೇರಿ ಎದುರು ನೂರಾರು ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಶರೀಫ್, ಈ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ಅಸಾಂವಿಧಾನಿಕ ಮತ್ತು ಪಕ್ಷಪಾತಪೂರ್ಣವಾಗಿದೆ. ಸರ್ಕಾರವು ಜನರ ಅಭಿಪ್ರಾಯವನ್ನು ಪರಿಗಣಿಸದೆ, ತನ್ನಿಚ್ಚೆಯಂತೆ ನಿರ್ಧಾರ ಕೈಗೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಬೇಸರ ವ್ಯಕ್ತಪಡಿಸಿದರು.
ಡಿಡಬ್ಲೂಸಿ ಸದಸ್ಯ ಸಲೀಂ ಪಾಷಾ ಮಾತನಾಡಿ, ವಕ್ಫ್ ಆಸ್ತಿಗಳನ್ನು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಬಳಸಬೇಕಾಗಿರುವಾಗ, ಈ ತಿದ್ದುಪಡಿ ಇದಕ್ಕೆ ವಿರುದ್ಧವಾಗಿದೆ. ಇದೊಂದು ದೊಡ್ಡ ಕುತಂತ್ರ ಎಂದು ಆರೋಪಿಸಿದರು.

ಇದೇ ವೇಳೆ ತಿದ್ದುಪಡಿ ಮಸೂದೆಯನ್ನು ಕೂಡಲೇ ವಾಪಾಸ್ ಪಡೆಯುವಂತೆ ಒತ್ತಾಯಿಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೆಟ್ರೋ ದರ ಏರಿಕೆ- ‘ಸತ್ತಂತೆಯೂ ಅತ್ತಂತೆಯೂ’ ಆಡುತ್ತಿರುವ ಈ ನಾಟಕ ನಿಲ್ಲಲಿ
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಜ್ಹರ್ ಪಾಷಾ, ಚನ್ನಪಟ್ಟಣ ತಾಲ್ಲೂಕು ಉಪಾಧ್ಯಕ್ಷ ಮೊಹಮ್ಮದ್ ಫಾಜಿಲ್, ರಾಮನಗರ ವಿಧಾನಸಭಾ ಅಧ್ಯಕ್ಷ ಮಹಬೂಬ್ ಪಾಷಾ ಮತ್ತಿತರರು ಹಾಜರಿದ್ದರು.