- ಏರ್ ಫೋರ್ಸ್ ಸ್ಟೇಷನ್ ಬೀದರ್ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಆಯೋಜನೆ
- ಬೀದರ್ ಕೊಟೆಯ ಮೇಲೆ ಏರ್ ಶೋ ಕಾರ್ಯಕ್ರಮದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕು.
ಸೆಪ್ಟೆಂಬರ್ 8 ಮತ್ತು 9 ರಂದು ಬೀದರ್ ಕೊಟೆಯ ಮೇಲೆ ಏರ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಸೋಮವಾರ ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಏರ್ ಶೋ ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯ ಗುರುಗಳು, ಸಿ.ಆರ್.ಸಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಏರ್ ಶೋ ಕಾರ್ಯಕ್ರಮ ಏರ್ ಫೋರ್ಸ್ ಸ್ಟೇಷನ್ ಬೀದರ್ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಆಯಾ ಶಾಲಾ- ಕಾಲೇಜುಗಳ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಸ್ಕೂಲ್‌ಬ್ಯಾಗ್ ಜೊತೆಗೆ ಮಕ್ಕಳನ್ನು ಕರೆತರಬೇಡಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೆ. 8 ರಂದು ಸಾಯಂಕಾಲ 4 ಗಂಟೆಗೆ ಜಿಲ್ಲೆಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಸೆಪ್ಟೆಂಬರ್ 9 ರಂದು ಸಾಯಂಕಾಲ 4 ಗಂಟೆಗೆ ಬೀದರ್ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಏರ್ ಶೋ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಲಿಸಲಾಗಿದ್ದು, ಬೀದರ್ ಏರ್ ಫೋರ್ಸ್ ಸ್ಟೇಷನ್ ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ಆಕರ್ಷಕ ಪ್ರದರ್ಶನ ನೀಡಲಿದೆ ಎಂದರು.
“ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮನರಂಜನೆ ಸಿಗುವುದು ಮಾತ್ರವಲ್ಲದೆ ವಿಮಾನಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿ ನಾವು ಏನಾದರೂ ಆಗಬೇಕೆನ್ನುವ ಕನಸುಗಳನ್ನು ಮಕ್ಕಳು ಕಟ್ಟಿಕೊಳ್ಳುತ್ತಾರೆ. ನಮ್ಮ ಜಿಲ್ಲೆಯಲ್ಲಿಯೆ ಏರ್ ಫೋರ್ಸ್ ಸ್ಟೇಷನ್ ಇರುವುದರಿಂದ ಅದರ ಸದುಪಯೋಗ ಏಕೆ ನಾವು ಪಡೆದುಕೊಳ್ಳಬಾರದು” ಎಂದರು.
ಕಳೆದ ಬಾರಿ ನಡೆದ ʼಏರ್ ಶೋʼ 20 ಸಾವಿರ ಜನರು ವೀಕ್ಷಣೆ:
“ಮಕ್ಕಳನ್ನು ಶಾಲಾ ವಾಹನಗಳಲ್ಲಿ ಸುರಕ್ಷಿತವಾಗಿ ಕರೆತಂದು ಏರ್ ಶೋ ನಡೆಯುವುದಕ್ಕಿಂತ ಮುಂಚಿತವಾಗಿಯೇ ಅವರನ್ನು ಕೋಟೆ ಒಳಗಡೆ ಕೂಡಿಸಬೇಕು, ವಾಹನ ಇಲ್ಲದ ಶಾಲೆಗಳಲ್ಲಿ ದಾನಿಗಳಿಂದ ವ್ಯವಸ್ಥೆ ಮಾಡಿ ಇಲ್ಲದಿದ್ದರೆ ಅಂತಹ ಶಾಲೆಗಳ ಮಾಹಿತಿ ನೀಡಿದರೆ ನಾವು ವ್ಯವಸ್ಥೆ ಮಾಡುತ್ತೆವೆ. ಕ್ಲಸ್ಟರ್ ಹಂತದಲ್ಲಿ ಎಷ್ಟು ವಿದ್ಯಾರ್ಥಿಗಳು ಬರುತ್ತಾರೆ ಎಂಬ ಮಾಹಿತಿ ನೀಡಿದರೆ ವಾಹನಗಳ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ. ಕಳೆದ ಏರ್ ಶೋ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಾದ ಹುಮನಾಬಾದ, ಭಾಲ್ಕಿ, ಔರಾದ ಸೇರಿದಂತೆ ಇತರೆ ಕಡೆಗಳಿಂದ 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಲ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು” ಹೇಳಿದರು.
“ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಮಾತನಾಡಿ, ಮಕ್ಕಳನ್ನು ಜವಾಬ್ದಾರಿಯಿಂದ ಕರೆತಂದ ಮೇಲೆ ಅಷ್ಟೇ ಜವಾಬ್ದಾರಿಯಿಂದ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು ಇದು ಆಯಾ ಶಾಲೆಗಳ ಶಿಕ್ಷಕರ ಜವಾಬ್ದಾರಿಯಾಗಿದೆ” ಎಂದರು.
“ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಮಕ್ಕಳನ್ನು ಶಾಲೆಯ ವಾಹನಗಳಲ್ಲಿ ಕರೆ ತರುವಾಗ ವಾಹನಗಳ ಮೇಲೆ ಬ್ಯಾನರ್ ಗಳನ್ನು ಹಾಕಿಕೊಂಡು ಬಂದರೆ ಗುರುತಿಸಲು ಅನುಕೂಲವಾಗುತ್ತದೆ ಹಾಗೂ ಎಷ್ಟು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನು ಮುಂಚಿತವಾಗಿ ನಮಗೆ ನೀಡಿದರೆ ಟ್ರಾಫಿಕ್ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಲಘು ಭೂಕಂಪನ
ಈ ಸಭೆಯಲ್ಲಿ ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ವಿಂಗ್ ಕಮಾಂಡರ್ ಅರ್ಜುನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಶಾಬಾದಕರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಲೀಂ ಪಾಶಾ, ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯ ಗುರುಗಳು, ಸಿ.ಆರ್.ಸಿಗಳು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.