ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ 19ನೇ ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ ಈ ಬಾರಿ 22ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ 67.31ರಷ್ಟು ದಾಖಲಾಗಿದೆ.
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 78 ಫಲಿತಾಂಶ ದಾಖಲಾಗಿ 18ನೇ ಸ್ಥಾನದಲ್ಲಿತ್ತು. 2023–24ರಲ್ಲಿ 19ನೇ ಸ್ಥಾನಕ್ಕೆ ಕುಸಿತ ಕಂಡರೂ ಶೇ 81.69 ಫಲಿತಾಂಶ ದಾಖಲಾಗುವ ಮೂಲಕ ಹೆಚ್ಚಳ ಕಂಡಿತು. ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಜೊತೆಗೆ ಸ್ಥಾನದಲ್ಲಿಯೂ ಕುಸಿತ ಕಂಡಿದೆ. ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿಬೀದರ್ ಜಿಲ್ಲೆ 22ನೇ ಸ್ಥಾನದಲ್ಲಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 18,730 ಫ್ರೆಶರ್ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 12,608 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.
ವಿಭಾಗವಾರು ಅಂಕಿ-ಅಂಶ :
ಈ ಬಾರಿ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 76.34ರಷ್ಟು ವಿಜ್ಞಾನ ವಿಭಾಗಕ್ಕೆ ಫಲಿತಾಂಶ ಬಂದಿದೆ. ಒಟ್ಟು 12,535 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9,569 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 2,323 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಪೈಕಿ 1,298 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 55.88ರಷ್ಟು ವಾಣಿಜ್ಯ ವಿಭಾಗಕ್ಕೆ ಫಲಿತಾಂಶ ಬಂದಿದ್ದು, ದ್ವಿತೀಯ ಸ್ಥಾನದಲ್ಲಿದೆ. ಇನ್ನು, ಕಲಾ ವಿಭಾಗಕ್ಕೆ ಶೇ 44.96ರಷ್ಟು ಫಲಿತಾಂಶ ಬಂದಿದೆ. ಒಟ್ಟು 3,872 ವಿದ್ಯಾರ್ಥಿಗಳಲ್ಲಿ 1,781 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ಅರ್ಧದಷ್ಟು ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಗಮನಾರ್ಹ ಅಂಶ.
2023-24ನೇ ವರ್ಷದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದರು. ಆದರೆ ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಶೇ 67.4ರಷ್ಟು ನಗರ ಪ್ರದೇಶದವರು ಉತ್ತೀರ್ಣರಾಗಿದ್ದಾರೆ. ಶೇ 66.97ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳು :
ವಿಜ್ಞಾನ ವಿಭಾಗದಲ್ಲಿ ಬಸವಕಲ್ಯಾಣದ ಕ್ರಿಸೆಂಟ್ ಪಿಯು ಕಾಲೇಜಿನ ಹುರಿಯಾ ಅಬ್ದುಲ್ ರಫೀಕ್ ಅವರು 592 ಅಂಕ ಗಳಿಸಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಪಿಯು ಕಾಲೇಜಿನ ಕಾರ್ತಿಕ ಚಂದ್ರಕಾಂತ, ಭಾಲ್ಕಿಯ ಡೈಮಂಡ್ ಪಿಯು ಕಾಲೇಜಿನ ಕೋಮಲ ಸುಭಾಷ ಮತ್ತು ಸಂಗೀತಾ ಶರಣಪ್ಪಾ ಮೂವರು ವಿದ್ಯಾರ್ಥಿಗಳು ತಲಾ 582 ಅಂಕಗಳ ಸಾಧನೆ ಮಾಡಿದ್ದಾರೆ. ಶಾಹೀನ್ ಪಿಯು ಕಾಲೇಜಿನ ಅರ್ಚನಾ ಶಶಿಕಾಂತ 581 ಅಂಕಗಳ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಬಸವಕಲ್ಯಾಣದ ಪುಣ್ಯಕೋಟಿ ಪಿಯು ಕಾಲೇಜಿನ ಮಾಣಿಕೇಶ್ವರಿ ಮಹಾದೇವ 584 ಅಂಕ ಗಳಿಸಿ ಜಿಲ್ಲೆಗೆ ದ್ವೀತಿಯ ಸ್ಥಾನ ಗಳಿಸಿದ್ದಾರೆ. ಅದೇ ಕಾಲೇಜಿನ ಪ್ರತಿಭಾ ಬಸವರಾಜ 583 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನದಲ್ಲಿದ್ದಾರೆ. ಇನ್ನು ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದ ಸಿದ್ದರಾಮೇಶ್ವರ ಪಿಯು ಕಾಲೇಜಿನ ಸುಧಾರಾಣಿ ಸಂಗಪ್ಪ 581 ಅಂಕಗಳ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬೀದರ್‌ನ ಜ್ಞಾನಸುಧಾ ಪಿಯು ಕಾಲೇಜಿನ ಆರವ ಸಂಜಯ 583 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನದಲ್ಲಿದ್ದರೆ, ಬೀದರ್ ತಾಲ್ಲೂಕಿನ ಮಂದಕನಳ್ಳಿಯ ಸರ್ಕಾರಿ ಪಿಯು ಕಾಲೇಜಿನ ಕೇತಕಿ ಸೋಮನಾಥ 574 ಅಂಕಗಳ ಸಾಧನೆ ಮಾಡಿದ್ದಾರೆ.
ಫಲಿತಾಂಶದಲ್ಲಿ ಏರಿಳಿತ :
ಪಿಯುಸಿ ಫಲಿತಾಂಶ ಬಂದಾಗ ಪ್ರತಿವರ್ಷ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳು ಸ್ಥಾನದಲ್ಲಿ ಏರಿಳಿತ ಕಾಣುತ್ತವೆ. ಈ ಬಾರಿ ರಾಯಚೂರ (ಶೇ 58.75), ಕಲಬುರಗಿ (55.70) ಹಾಗೂ ಯಾದಗಿರಿ (48.45) ಜಿಲ್ಲೆಗಳು ಕ್ರಮವಾಗಿ 30, 31 ಹಾಗೂ 32ನೇ ಸ್ಥಾನದಲ್ಲಿವೆ. 23ನೇ ಸ್ಥಾನದಲ್ಲಿ ಕೊಪ್ಪಳ (67.20) ಹಾಗೂ ಬಳ್ಳಾರಿ (64.41) 27ನೇ ಸ್ಥಾನದಲ್ಲಿದೆ. ರಾಜ್ಯದ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿರುವ ಬೀದರ್ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ₹15.22 ಕೋಟಿ ತೆರಿಗೆ ಸಂಗ್ರಹ : ಸಿಇಒ ಡಾ. ಗಿರೀಶ್ ಬದೋಲೆ
ಈ ಬಾರಿ ಇಲಾಖೆ ನಿರ್ದೇಶನದಂತೆ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಿತಿ ರಚನೆ ಮಾಡಿ, ಪಿಯು ಕಾಲೇಜುಗಳಿಗೆ ಭೇಟಿ ಮಾಡಿ ಫಲಿತಾಂಶದ ವಿಶ್ಲೇಷಣೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗಿತ್ತು. ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದ ವಿಶೇಷ ಕಾರ್ಯಗಾರ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಿಗ್ಗೆ, ಸಾಯಂಕಾಲ ವಿಶೇಷ ತರಗತಿ ನಡೆಸಲಾಗಿತ್ತು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.