ಕಲಬುರಗಿ ಜಿಲ್ಲೆಯ ಸೇಡಂ-ಚಿಂಚೋಳಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದ್ದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೇಡಂ ತಾಲೂಕು ಕೇಂದ್ರದಿಂದ ಚಿಂಚೋಳಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿಗಳು ಬಿದ್ದಿವೆ, ಗುಂಡಿಯಲ್ಲಿ ಮಳೆ ನೀರು ಸಂಗ್ರಹಗೊಂಡ ಪರಿಣಾಮ ವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ʼರಸ್ತೆ ತುಂಬಾ ಗುಂಡಿಗಳು ಬಿದ್ದು ಹಲವು ತಿಂಗಳು ಕಳೆದರೂ ಯಾರೊಬ್ಬರೂ ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲ. ಈ ರಸ್ತೆಯಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ವೃದ್ಧರು, ವ್ಯಾಪಾರಿಗಳು ನಿತ್ಯವೂ ಸಂಚರಿಸುತ್ತಾರೆ. ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಶೇಖರ್ ಸೇಡಂ ಆಗ್ರಹಿಸಿದರು.