ತುರುವೇಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ 8 ಸ್ಥಾನಗಳಿಗೆ ಸೋಮವಾರ ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.
ತುರುವೇಕೆರೆ ತಾಲೂಕು ಸರ್ಕಾರಿ ನೌಕರರ ಸಂಘದಲ್ಲಿ ಒಟ್ಟು 32 ನಿರ್ದೇಶಕರ ಸ್ಥಾನಗಳು ಇವೆ. ಇವುಗಳ ಪೈಕಿ ಈಗಾಗಲೇ ವಿವಿಧ ಇಲಾಖೆಗಳಿಂದ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 8 ಸ್ಥಾನಗಳಿಗೆ ಸೋಮವಾರ ಬೆಳಗ್ಗೆ 9 ಕ್ಕೆ ಮತದಾನ ಪ್ರಾರಂಭವಾಗಿ 4 ಗಂಟೆಗೆ ಮುಕ್ತಾಯವಾಯಿತು. 8 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 24 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ 583, ಪ್ರೌಢಶಾಲೆ ವಿಭಾಗದಿಂದ 132, ಐಟಿಐ ಯಿಂದ 27, ತಾಲ್ಲೂಕು ಪಂಚಾಯಿತಿಯಿಂದ 52, ಪಿಯುಸಿ ಮತ್ತು ಪದವಿ ಕಾಲೇಜಿನ ವಿಭಾಗದಿಂದ 46 ಮತದಾರರಿದ್ದರು.
ಸರ್ಕಾರಿ ಪ್ರೌಢಶಾಲಾ ವಿಭಾಗದಿಂದ ಅಂಚೀಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಎಂ.ಬಿ.ಲೋಕೇಶ್, ಪಿಯುಸಿ ವಿಭಾಗದಿಂದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಎಚ್.ಪಿ.ಪಾಪಣ್ಣ, ಗ್ರಾಮ ಪಂಚಾಯಿತಿ ವತಿಯಿಂದ ನರೇಂದ್ರ ಜಿ.ಎಸ್, ಸರ್ಕಾರಿ ಐಟಿಐ ಕಾಲೇಜು ವಿಭಾಗದಿಂದ ಜಯಕುಮಾರ ಸ್ವಾಮಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಸ್ಪರ್ಧಿಸಿರುವವರ ಮತ ಏಣಿಕೆ ಕಾರ್ಯ ನಡೆಯುತ್ತಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.