ಮೈಸೂರು ಜಿಲ್ಲೆ,ಹೆಗ್ಗಡದೇವನಕೋಟೆಯ ದಸಂಸ ಹಿರಿಯ ಮುಖಂಡರಾದ ಬೆಟ್ಟಯ್ಯಕೋಟೆ ಅವರಿಗೆ ಬೆಂಗಳೂರಿನ ಸ್ಫೂರ್ತಿಧಾಮ ಕೊಡ ಮಾಡುವ ಪ್ರತಿಷ್ಠಿತ 2025 ನೇ ಸಾಲಿನ ‘ ಬೋಧಿವರ್ಧನ ‘ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೋಷಿತ ಸಮುದಾಯಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಸ್ಫೂರ್ತಿಧಾಮ ಪ್ರತಿವರ್ಷ ‘ ಭೋದಿವೃಕ್ಷ ‘ ಹಾಗೂ ‘ ಬೋಧಿವರ್ಧನ ‘ ಪ್ರಶಸ್ತಿಯನ್ನು ಹೋರಾಟಗಾರರಿಗೆ ನೀಡುವುದರ ಮೂಲಕ ಗೌರವ ಸಲ್ಲಿಸುತಿದೆ.
ಬೆಟ್ಟಯ್ಯಕೋಟೆಯವರು 70 ರ ದಶಕದಲ್ಲಿ ‘ ದಲಿತ ಸೇವಕ ಸಂಘ’ದ ಮೂಲಕ ಹೋರಾಟಕ್ಕೆ ಪಾದರ್ಪಣೆ ಮಾಡಿದವರು. 80 ರ ದಶಕದಲ್ಲಿ ಅಂದರೆ 1981 ರಲ್ಲಿ ದಲಿತ ಸಂಘರ್ಷ ಸಮಿತಿಗೆ ಸೇರಿ ಹೆಗ್ಗಡದೇವನ ಕೋಟೆ ತಾಲ್ಲೂಕು ಸಂಚಾಲಕರಾಗಿ ಜನಪರ ಹೋರಾಟಗಳನ್ನು ಮುನ್ನಡೆಸಲು ಆರಂಭಿಸಿದರು.
ಬೆಟ್ಟಯ್ಯಕೋಟೆಯವರ ನೇತೃತ್ವದಲ್ಲಿ ಮೈಸೂರಿನ ಬೆಲವತ್ತ, ಪಡುಕೋಟೆ, ಹುಣಸೆಕುಪ್ಪೆ, ಪಿರಿಯಾಪಟ್ಟಣದ ಗುಡ್ಡೆನಳ್ಳಿ, ದೇವಲಾಪುರ, ಹುಣಸೂರಿನ ಬಿ. ಆರ್. ಕಾವಲ್, ನಂಜಯ್ಯನ ಕಾಲೋನಿಗಳಲ್ಲಿ ನಡೆದ ಭೂ ಹೋರಾಟಗಳು ಪ್ರಮುಖವಾಗಿದ್ದು ನೂರಾರು ಕುಟುಂಬಗಳಿಗೆ ಭೂಮಿ ಲಭಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಅದಲ್ಲದೆ, ಬದಾನವಾಳು, ಸರಗೂರಿನಲ್ಲಿ ದಲಿತರ ಮೇಲೆ ನಡೆದಿದ್ದ ಹತ್ಯಾಕಾಂಡದ ವಿರುದ್ಧ ಬೃಹತ್ ಚಳುವಳಿ ನಡೆಸಿ ದಲಿತರಿಗಾದ ಅನ್ಯಾಯವನ್ನು ಗುರುತಿಸುವಂತೆ ಮಾಡಿದಲ್ಲದೆ. ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ಹೋರಾಟ ಕಟ್ಟಿ ಗಮನ ಸೆಳೆದಿದ್ದರು.
ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ತಳಮಟ್ಟದಿಂದ, ಸಕ್ರಿಯವಾಗಿ ಕಟ್ಟುವಲ್ಲಿ, ಸಂಘಟಿಸುವಲ್ಲಿ ಪ್ರಮುಖರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಕ್ರಿಯರಾಗಿರುವ ಬೆಟ್ಟಯ್ಯ ಕೋಟೆಯವರು ಜಿಲ್ಲೆಯ ದಸಂಸ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿ ನಡೆಸಿಕೊಂಡು ಬರುತಿದ್ದಾರೆ.
ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ವಿವಿಧೋದ್ದೇಶ ಸಂಘ ನಿರ್ಮಿಸಿ ಬಡವರಿಗೆ ಆರ್ಥಿಕವಾಗಿ ಅನುಕೂಲವಾಗುವಂತೆ ಮಾಡಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೋರಾಟದಲ್ಲಿ ಸದಾ ಮುಂದಿರುವ ಬೆಟ್ಟಯ್ಯಕೋಟೆ ಇಂದಿನವರಿಗೆ ಸ್ಫೂರ್ತಿಯಾಗಿದ್ದು, ಹೋರಾಟಕ್ಕೆ ಮಾದರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಾಡಿ ಜನರ ಜಮೀನು ದಾರಿ ಒತ್ತುವರಿ; ಮನವಿಗೆ ಸ್ಪಂದಿಸದ ತಹಶೀಲ್ದಾರ್
ಏ. 14 ರ ಅಂಬೇಡ್ಕರ್ ಜಯಂತಿಯಂದು ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ವಿಧಾನಸಭೆ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ವೇದಿಕೆಯಲ್ಲಿ ಸ್ಫೂರ್ತಿಧಾಮ ಅಧ್ಯಕ್ಷ ಎನ್. ಮರಿಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಇರಲಿದ್ದು, ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿರುತ್ತದೆ.