ಜಿಲ್ಲೆಯ ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ಜರುಗಿದೆ.
ಆಟೊಗೆ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಬಸವಕಲ್ಯಾಣ ಹೊರವಲಯದ ಪರ್ತಾಪುರ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ವಿನೋದ ಗಾಯಕವಾಡ (35) ಮೃತ ಯುವಕ.
ವಿನೋದ ಪರ್ತಾಪುರ ಗ್ರಾಮದಿಂದ ಬಸವಕಲ್ಯಾಣ ನಗರಕ್ಕೆ ಆಟೊದಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಬಸವಕಲ್ಯಾಣ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಯುವಕ ಸಾವು :
ಟ್ರ್ಯಾಕ್ಟರ್-ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ಬಾಜೋಳಗಾ (ಕೆ) ಗ್ರಾಮದ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಭಾಲ್ಕಿ ತಾಲ್ಲೂಕಿನ ಮರೂರ್ ಗ್ರಾಮದ ಪ್ರಶಾಂತ್ (18) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಪ್ರಶಾಂತ್ ಹಾಗೂ ಸಂಬಂಧಿಕ ಕನಿಲ್ ಇಬ್ಬರು ಬಸವಕಲ್ಯಾಣದಿಂದ ಭಾಲ್ಕಿ ಕಡೆಗೆ ಬೈಕ್ ಮೇಲೆ ಮಧ್ಯರಾತ್ರಿ ತೆರಳುತ್ತಿದ್ದರು. ಈ ವೇಳೆ ಬಾಜೋಳಗಾ (ಕೆ)- ದಾಡಗಿ ಸಮೀಪ ಟ್ರ್ಯಾಕ್ಟರ್ ಬೈಕ್ ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಶಾಂತ್ ಸ್ಥಳದಲ್ಲೇ ಸಾವನಪ್ಪಿದ್ದು, ಕನಿಲ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹೊಸ ವರ್ಷಾಚರಣೆ : ಶುಭ ಕೋರುವ APK ಫೈಲ್ ಕ್ಲಿಕ್ಕಿಸಬೇಡಿ : ಎಸ್ಪಿ ಪ್ರದೀಪ್ ಗುಂಟಿ
ಗಾಯಗೊಂಡ ಕನಿಲ್ ಗೆ ಭಾಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.