ನಮ್ಮ ಸರಕಾರದ ತೀರ್ಮಾನದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆ.15ರಂದು ಕರ್ನಾಟಕ ರಾಜ್ಯದಾದ್ಯಂತ ವಿನೂತನವಾಗಿ ಆಚರಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 2,800 ಕಿ.ಮೀ. ಮಾನವ ಸರಪಳಿ ರಚಿಸಲಾಗುತ್ತಿದೆ’ ಎಂದರು.
‘ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಕಲ್ಯಾಣದ ಅನುಭವ ಮಂಟಪದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿರುವುದು ವಿಶೇಷವಾಗಿದೆ. ಬಸವಕಲ್ಯಾಣದಿಂದ ಬೀದರ್ ಜಿಲ್ಲೆಯ ಗಡಿ ಗ್ರಾಮ ಹಳ್ಳಿಖೇಡ(ಕೆ)ವರೆಗೆ ಒಟ್ಟು 45 ಕಿ.ಮೀ. ಆಗಲಿದ್ದು, 40 ಸಾವಿರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಈ ಕುರಿತು ಈಗಾಗಲೇ ಅಧಿಕಾರಿಗಳು ಸುಮಾರು ಸಭೆಗಳನ್ನು ಮಾಡಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು, ಸರಕಾರಿ ನೌಕರರು, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಸಂವಿಧಾನದ ಆಶಯದಂತೆ ಸ್ವಾತಂತ್ರ‍್ಯ, ಸಮಾನತೆ, ಭಾತೃತ್ವ ಮತ್ತು ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುವುದಾಗಿದೆ. ಈ ಕುರಿತು ನಮ್ಮ ಮಕ್ಕಳಿಗೆ ಜಾಗೃತಿ ಮೂಡಿಸುವದರ ಜೊತೆಗೆ ದ್ವೇಷ, ಅಸೂಯೆ ಮತ್ತು ಮತಾಂಧತೆಯನ್ನು ಹೋಗಲಾಡಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಸೆ.15 ರಂದು ಬೆಳಿಗ್ಗೆ 8:30 ಕ್ಕೆ ಬಸವಕಲ್ಯಾಣ ಅನುಭವ ಮಂಟಪದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 45 ಕಿ.ಮೀ. ಮಾನವ ಸರಪಳಿ ರಚಿಸುವುದರ ಜೊತೆಗೆ 1 ಕಿ.ಮೀ ಉದ್ದದ ನಮ್ಮ ರಾಜ್ಯದ ಧ್ವಜ ಹಾಗೂ ರಾಷ್ಟ್ರದ ಧ್ವಜವನ್ನು ಹಿಡಿದು ಮಕ್ಕಳು ಮುನ್ನಡೆಯುವರು. ಇದರಲ್ಲಿ ಸಂವಿಧಾನದ ಪೀಠಿಕೆಯ ವಾಚನ ಇರುತ್ತದೆ. ಹಾಗಾಗಿ ಜಿಲ್ಲೆಯ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಹುಮನಾಬಾದ ಶಾಸಕ ಡಾ. ಸಿದ್ದಲಿಂಗಪ್ಪ ಎನ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮೂಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬ್ಯಾಲಹಳ್ಳಿ(ಕೆ) ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ಜಾಧವ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಸಿಇಓ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್.ಎಸ್. ಸೇರಿದಂತೆ ಇತರರಿದ್ದರು.