ಮೂರು ಲಾರಿಗಳು, 1 ಸ್ಲೀಪರ್ ಬಸ್ ಹಾಗೂ ಒಂದು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ತಾಲೂಕಿನ ವೆಂಕಟಗಿರಿಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಸ್ಲೀಪರ್ ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್ ಕ್ಲೀನರ್ ಮತ್ತು ಕ್ಯಾಂಟರ್ ಲಾರಿ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಮುಂಜಾನೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಕಾರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಕಾರು-ಲಾರಿಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ. ಲಾರಿಯ ಹಿಂದಿನಿಂದಲೇ ಬರುತ್ತಿದ್ದ ಬಸ್ ಹಾಗೂ ಇತರ ಎರಡು ಲಾರಿಗಳು ಕೂಡ ಅಪಘಾತವಾಗಿದ್ದ ಲಾರಿಗೆ ಡಿಕ್ಕಿ ಹೊಡೆದುಕೊಂಡಿವೆ. ಅಪಘಾತವನ್ನು ಕಂಡು ಕ್ಯಾಂಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಕ್ಯಾಂಟರ್ ಪಲ್ಟಿಯಾಗಿದೆ.
ಸರಣಿ ಅಪಘಾತಕ್ಕೆ ಒಳಗಾದ ವಾಹನಗಳನ್ನು ತೆರವುಗೊಳಿಸಲಾಗುತ್ತಿದ್ದು, ಹೆದ್ದಾರಿಯಲ್ಲಿ ಒಂದು ಬದಿಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಅಪಘಾತಕ್ಕೀಡಾದ ವಾಹನಗಳ ಪೈಕಿ ಇಬ್ಬರು ಚಾಲಕರು ತಮ್ಮ ವಾಹನಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.