ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ಹಲವೆಡೆ ಭಾನುವಾರ ಮಳೆಯಾಗಿದ್ದು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾದ್ಯಂತ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ.
ಮಡಿಕೇರಿಯಲ್ಲಿ ಅರ್ಧ ಗಂಟೆ ಬಿರುಸಿನ ಮಳೆಯಾಯಿತು. ಸೋಮವಾರ ಪೇಟೆ, ವಿರಾಜಪೇಟೆ, ನಾಪೋಕ್ಲುವಿನಲ್ಲಿ ಸಾಧಾರಣ ಮಳೆಯಾಗಿದೆ.
ಮೈಸೂರು ನಗರದಲ್ಲಿ ರಾತ್ರಿ ಗುಡುಗು–ಸಿಡಿಲು ಸಹಿತ ಜೋರು ಮಳೆಯಾಯಿತು. ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಭಾಗದಲ್ಲಿ, ಹಾಸನ ಜಿಲ್ಲೆಯ ಹಲವೆಡೆಯೂ ಮಳೆಯಾಗಿದೆ.
ಶಿವಮೊಗ್ಗ ನಗರದಲ್ಲಿ ಸಂಜೆ ಅರ್ಧ ಗಂಟೆ ವರುಣನ ಆರ್ಭಟ ನಡೆಯಿತು. ಸಾಗರ ತಾಲೂಕಿನಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಮಳೆ ಸುರಿಯಿತು. ಗಾಳಿಯ ರಭಸಕ್ಕೆ ಆರು ಮನೆಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಆನಂದಪುರ ಹಾಗೂ ಶಿಕಾರಿಪುರ ಸುತ್ತಮುತ್ತಲೂ ಮಳೆ ಸುರಿದಿದೆ.
ದಾವಣಗೆರೆಯಲ್ಲಿ ರಾತ್ರಿ ಸುಮಾರು ಅರ್ಧಗಂಟೆ ಜೋರು ಮಳೆ ಸುರಿಯಿತು. ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಸಂಕಷ್ಟ ಅನುಭವಿಸಿದರು. ಜಿಲ್ಲೆಯ ಕಡರನಾಯ್ಕನಹಳ್ಳಿ, ಮಲೇಬೆನ್ನೂರು, ಹರಿಹರ, ಹೊನ್ನಾಳಿಯಲ್ಲೂ ಮಳೆ ಸುರಿದಿದೆ.
ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭಾನುವಾರ ಸಂಜೆ ತಾಸಿಗೂ ಹೆಚ್ಚು ಮಳೆ ಸುರಿಯಿತು. ರಭಸದಿಂದ ಮಳೆ ಜೊತೆಗೆ ಗಾಳಿ, ಗುಡುಗು, ಸಿಡಿಲುಗಳ ಆರ್ಭಟವೂ ಜೋರಾಗಿತ್ತು. ಇದರಿಂದ ಕೆಲವೆಡೆ ರಸ್ತೆಗಳು ಹೊಳೆಯಂತೆ ಕಾಣತೊಡಗಿದ್ದವು.
ನಾಲ್ಕು ದಿನಗಳಿಂದ ಸಂಜೆಯಾದಂತೆಯೇ ಮಳೆ ಶುರುವಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಗಳು ಕೆರೆಯಂತಾಗುತ್ತಿವೆ.
ಹೆಚ್ಚಿನ ಕಡೆ ಒಳಚರಂಡಿಗಳು ಕಟ್ಟಿಕೊಂಡಿವೆ. ಕೆಲವು ಕಡೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಇದು ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಇದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೂ ಕೊಳಚೆ ನೀರು ನುಗ್ಗಿತು. ಕೆಲವು ಮನೆ ಹಾಗೂ ಮಳಿಗೆಗಳ ನೆಲಮಹಡಿಗಳಲ್ಲಿ ಮೊಳಕಾಲವರೆಗೆ ನೀರು ನಿಂತಿದ್ದು, ಪಂಪ್‌ಸೆಟ್‌ಗಳಿಂದ ಹೊರ ಹಾಕಲಾಯಿತು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭದ್ರಾವತಿ ಭದ್ರಾ ನದಿ ಪಾಲಾದ ಮಗ,ತಂದೆಗಾಗಿ ಶೋಧ
ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ಎರಡು–ಮೂರು ಅಡಿ ನೀರು ನಿಂತು ವಾಹನ ಸವಾರರು ಪರದಾಡಿದರು. ರಸ್ತೆಯಲ್ಲಿ ಹಲವು ಅಡಿ ನೀರು ನಿಂತ ಕಾರಣ ಮೈಲುಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.