ಹಾಸನ ವಿಶ್ವವಿದ್ಯಾಲಯವನ್ನು ಇಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಎಸ್‌ಎಫ್‌ಐ, ಡಿವೈಎಫ್‌ಐ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಬುಧವಾರವೂ ಹೇಮಗಂಗೋತ್ರಿ ಕಾಲೇಜು ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಕರವೇ ಮತ್ತು ರೈತ ಸಂಘಟನೆ ನಾಯಕರು ಹಾಗೂ ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ್ ಮೂರ್ತಿಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
“ಉಪಮುಖ್ಯಮಂತ್ರಿಗಳ ನೇತೃತ್ವದ ಸಂಪುಟ ಉಪಸಮಿತಿಯ ಕಳೆದ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ ಎಂಟು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ತೀರ್ಮಾನಿಸಿದೆ ಎಂಬ ವರದಿಯಾಗಿದ್ದು, ಈ ಪಟ್ಟಿಯಲ್ಲಿ ಹಾಸನ ವಿಶ್ವವಿದ್ಯಾಲಯವೂ ಸೇರಿದೆ. ಈಗಷ್ಟೇ ಶುರುವಾಗಿರುವ ವಿಶ್ವವಿದ್ಯಾಲಯವನ್ನು ಮುಚ್ಚಬೇಕಾಗಿರುವುದು ಈ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ. ಇದರಿಂದ ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಂಬುದು ದುಬಾರಿಯಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಪ್ರಸ್ತುತ ನಮ್ಮ ಜಿಲ್ಲೆಯ ಹಾಸನ ವಿಶ್ವವಿದ್ಯಾಲಯದ ವ್ಯಾಪ್ತಿಗೆ 57 ಕಾಲೇಜುಗಳು ಸೇರಿದ್ದು, ಒಟ್ಟು 23 ಸಾವಿರ ಮಂದಿ ವಿದ್ಯಾರ್ಥಿಗಳು(ಸ್ನಾತಕ ಮತ್ತು ಸ್ನಾತಕೋತ್ತರ) ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚದೆ ಮುಂದುವರಿಸಬೇಕು. ಜತೆಗೆ ಹಾಸನ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸುವುದು ನಿಯಮ ಉಲ್ಲಂಘನೆ: ಎಸ್ ಎ ಗಫಾರ್
“ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು ಪಕ್ಕದ ಜಿಲ್ಲೆ ಅಥವಾ ರಾಜಧಾನಿಗೆ ಪದವಿ, ಸ್ನಾತಕೋತರ ಪದವಿ ಶಿಕ್ಷಣ ಪಡೆಯಲು ಹೋಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಹಾಸನ ವಿಶ್ವವಿದ್ಯಾಲಯವನ್ನು ಇಲ್ಲೇ ಉಳಿಸಬೇಕು” ಎಂದು ಆಗ್ರಹಿಸಿದರು.
