ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಾದ್ಯಾಂತ ಖಾಸಗಿ ಶಾಲೆಗಳು ಹಾಗೂ ಅನುದಾನಿತ ಖಾಸಗಿ ಶಾಲೆಗಳು ಸರ್ಕಾರದ ಪರವಾನಿಗೆ ಇಲ್ಲದೆ ವಸತಿ ಸಹಿತ ಎಂದು ನಾಮಫಲಕ ಹಾಕಿಕೊಂಡು ಅನಧಿಕೃತವಾಗಿ ವಸತಿ ಸೌಲಭ್ಯದೊಂದಿಗೆ 1 ರಿಂದ 8ನೇ ತರಗತಿಯವರೆಗೆ ತರಗತಿಗಳನ್ನು ನಡೆಸುತ್ತಿವೆ. ಇಂತಹ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು 2024ರ ಜೂನ್ 10ರಂದು ದೂರು ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ, ಪರವಾನಗಿ ಪಡೆಯದೆ ಹಾಸ್ಟೆಲ್ ನಡೆಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ) ಒತ್ತಾಯಿಸಿದೆ.
ಶಹಾಪುರದಲ್ಲಿ ಪ್ರತಿಭಟನೆ ನಡೆಸಿದ ದಸಂಸ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, “ಶಹಾಪೂರ ತಾಲೂಕಿನಾದ್ಯಂತ ಖಾಸಗಿ ಶಾಲೆಗಳು ಹಾಗೂ ಅನುದಾನಿತ ಖಾಸಗಿ ಶಾಲೆಗಳು 1 ರಿಂದ 5ನೇ ತರಗತಿಯವರೆಗೆ ಸರ್ಕಾರದ ಪರವಾನಿಗೆ ಇಲ್ಲದೇ ಹಾಸ್ಟೆಲ್‌ಗಳನ್ನು ನಡೆಯುತ್ತಿವೆ. ವಸತಿ ಸಹಿತ ಶಾಲೆಗಳು ಎಂದು ಹೇಳಿಕೊಂಡು ಪ್ರತಿ ವಿದ್ಯಾರ್ಥಿಯಿಂದ 40 ರಿಂದ 50,000 ರೂ. ವಸೂಲಿ ಮಾಡುತ್ತಿದ್ದಾರೆ. ಅಂತಹ ಶಾಲೆಗಳನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿರುವ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-198ರ ನಿಯಮ 35ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪರವಾನಿಗೆ ಇಲ್ಲದ ಈ ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆಯಾದರೆ, ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಕೂಡಲೇ ಶಹಾಪೂರ ನಗರದಲ್ಲಿ ವಸತಿ ಸಹಿತ ಕೊಚಿಂಗ್ ನೆಪದಲ್ಲಿ 60-70 ಖಾಸಗಿ ಶಾಲೆಗಳು ಎಗ್ಗೆಲ್ಲದೆ ನಡೆಯುತ್ತಿದ್ದು, ಅವುಗಳನ್ನು ಬಂದ್ ಮಾಡಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಶಿವಪುತ್ರ ಜವಳಿ,ಮರೆಪ್ಪ ಕ್ರಾಂತಿ, ಶಿವಲಿಂಗ ಹಸನಾಪೂರ್, ಚಂದಪ್ಪ ಮುನಿಯಪ್ಪನೂರ, ಶಿವಕುಮಾರ ತಳವಾರ, ಮಲ್ಲಪ್ಪ ಪೂಜಾರಿ, ಮಲ್ಲಿಕಾರ್ಜುನ ಹೊಸಮನಿ, ಬಾಲರಾಜ ಖಾನಾಪುರ, ಬಲಭೀಮ ಬೇವಿನಹಳ್ಳಿ, ವಸಂತಕುಮಾರ್, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ಶ್ರೀಮಂತ,
ನಾಗರಾಜ್, ಕೊಡಮನಹಳ್ಳಿ, ಶಿವಪುತ್ರ ಡಾಂಗೆ, ಶರಣಪ್ಪ ಕೋಟಿ, ಎಂ. ಪಟೇಲ್, ಚನ್ನಬಸ್ಸು ಗುರುಸುಣಗಿ, ತಿಪ್ಪಣ್ಣ ಶೆಳ್ಳಗಿ, ಸುಭಾಸ್, ನಾಗರಾಜ ಹುರಸಗುಂಡಗಿ, ಭೀಮಶಂಕರ, ಬಸಲಿಂಗಪ್ಪ ಹಳ್ಳಿ, ನಾಗರಾಜ್ ದೋರನಹಳ್ಳಿ, ಮಲ್ಲಪ್ಪ, ಬಸಲಿಂಗ, ಸಾಬಣ್ಣ, ಹೊನ್ನಾಪ್ಪ ಪೂಜಾರಿ, ಜೈಭೀಮ, ಹಣಮಂತ ಪೂಜಾರಿ, ಸಾಬಣ್ಣ ಕೋಳಿ,ಪರಶುರಾಮ, ಇನ್ನಿತರರು ಇದ್ದರು.