ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳ ಒಕ್ಕೂಟ ಮಂಗಳವಾರ ಕರೆ ನೀಡಿದ ಶಹಾಪುರ ಬಂದ್ ಯಶಸ್ವಿಯಾಯಿತು. ಪ್ರತಿಭಟನೆಯಲ್ಲಿ ಅಮಿತ್ ಶಾ ಶವಯಾತ್ರೆ ಅಣಕು ಶವಯಾತ್ರೆ ನಡೆಸಿ, ಭಾವಚಿತ್ರ ಪ್ರತಿಕೃತಿ ದಹಿಸಲಾಯಿತು.
ದಲಿತಪರ, ಪ್ರಗತಿಪರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಳಿಗ್ಗೆಯಿಂದ ಪ್ರತಿಭಟನೆ ಆರಂಭಿಸಿದ ಹೋರಾಟಗಾರರು, ಪಾದಯಾತ್ರೆ, ಬೈಕ್ ರ್ಯಾಲಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

ಬೆಳ್ಳಿಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲಿಸಿದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ, ಆಟೊ ಸೇರಿದಂತೆ ವಾಹನಗಳ ಓಡಾಟ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಬಂದ್ ಹಿನ್ನಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಶಹಾಪುರ ನಗರದ ಎಲ್ಲಾ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿತ್ತು.
ಬೆಳಿಗ್ಗೆಯಿಂದ ವಿವಿಧ ಗ್ರಾಮಗಳಿಂದ ಆಗಮಿಸಿದ ಮಕ್ಕಳು, ಮಹಿಳೆಯರು, ಹೋರಾಟಗಾರರು ಕೈಯಲ್ಲಿ ನೀಲಿ ಬಾವುಟ, ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದುಕೊಂಡು ಗಮನ ಸೆಳೆದರು.
ಶಹಾಪುರ ನಗರದ ಕನ್ಯಾಕೊಳೂರು ಅಗಸಿಯಿಂದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣದ ಮೂಲಕ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಬಸವೇಶ್ವರ ವೃತ್ತಕ್ಕೆ ಹಿಂತಿರುಗಿ ಅಮಿತ್ ಶಾ ಅವರ ಅಣುಕು ಶವಯಾತ್ರೆ ನಡೆಸಿ ಜೈ ಭೀಮ್ ಘೋಷಣೆ ಕೂಗಿದರು. ಬಳಿಕ ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದೇಶಿಸಿ ಮಾತನಾಡಿದ ವಿಶ್ವರಾಧ್ಯ ಸತ್ಯಂಪೇಟೆ, ಅಯ್ಯಣ ಕನ್ಯಾಕೋಳೂರು, ಶರಣು ಗದ್ದುಗೆ, ನೀಲಕಂಠ ಬಡಿಗೇರ್, ದೇವೇಂದ್ರ ಹೆಗಡೆ, ಮರೆಪ್ಪಾ ಚಟ್ಟೇರಕರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ʼರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಪುಟದಲ್ಲಿ ಮಂದುವರೆಯಲು ಯಾವ ನೈತಿಕತೆಯೂ ಇಲ್ಲ. ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.
ʼಭಾರತೀಯ ಸಂವಿಧಾನದಿಂದಲೇ ಸಂಸತ್ ಪ್ರವೇಶಿಸಿ ಗೃಹ ಮಂತ್ರಿಯಾದ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದು ದೇಶದ ಕೋಟಿ ಕೋಟಿ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಜಾತಿವಾದಿ ಮನಸ್ಥಿತಿಯ ಅಮಿತ್ ಶಾ ಅಧಿಕಾರದ ದರ್ಪದಿಂದ ಬಾಬಾ ಸಾಹೇಬ್‌ರನ್ನು ಅವಮಾನಿಸಿ ದೇಶದ್ರೋಹ ಕೃತ್ಯ ಎಸಗಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕು ಕಲ್ಪಿಸಿದ ಅಂಬೇಡ್ಕರ್ ಅವರ ಅಪಮಾನ ಸಹಿಸಲಾಗದುʼ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ʼಬಿಜೆಪಿ, ಆರ್‌ಎಸ್‌ಎಸ್ ಡಾ.ಅಂಬೇಡ್ಕರ್ ಅವರ ವಿಚಾರಗಳು ಹಾಗೂ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ದೇಶದಲ್ಲಿ ಮನುಸ್ಮೃತಿ ಹೇರಲು ಹೊರಟಿರುವ ಬಿಜೆಪಿ ಅಂಬೇಡ್ಕರ್ ಅವರನ್ನು ಅಗೌರವದಿಂದ ಕಾಣುವುದು, ಸಂವಿಧಾನಕ್ಕೆ ಅಪಮಾನ ಮಾಡುವುದು ನಿರಂತರವಾಗಿ ಮಾಡುತ್ತಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಒಗ್ಗೂಡಿ ಮನುವಾದಿಗಳ ವಿರುದ್ಧ ಗಟ್ಟಿಯಾಗಿ ದನಿಯೆತ್ತಬೇಕಾಗಿದೆʼ ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹೊಟ್ಟೆಯಲ್ಲೇ ಮಗು ಸಾವು; ಚಿಕಿತ್ಸೆ ಫಲಿಸದೆ ತಾಯಿಯೂ ಮರಣ
ಪ್ರತಿಭಟನೆಯಲ್ಲಿ ಮರೆಪ್ಪ ಜಾಲಿಮಂಚಿ, ಬಸವರಾಜ ಗುಡಿಮನಿ, ವಾಸುದೇವ ಕಟ್ಟಿಮನಿ, ಸೈಯದ್ ಖಾಲಿದ್, ಸೈಯದ್ ಖಾದ್ರಿ, ರವೀಂದ್ರನಾಥ ಹೊಸಮನಿ, ಮಲ್ಲಿಕಾರ್ಜುನ ಪೂಜಾರಿ, ವಿಶ್ವನಾಥ ನಾಟ್ಟೇಕರ್, ಶೇಖರ್ ಬಡಿಗೇರ, ಸಿದ್ದು ಮುಂಡಾಸ್, ಚಂದ್ರಶೇಖರ ಜಾಧ್ವ ಶರಣು ದೊರನಹಳ್ಳಿ, ಸಂತೋಷ, ಬಸವರಾಜ ಚಿಪ್ಪರ್, ಅಬ್ದುಲ್ ಸತ್ತಾರ್, ಭೀಮಣ್ಣ ಮೇಟಿ, ಶಿವು ಪೋತೆ, ನಿಂಗಪ್ಪ ಸತ್ಯಂಪೇಟ, ಲಕ್ಷ್ಮಣ, ರಾಯಪ್ಪ ಸಾಲಿಮನಿ, ಅಂಬರೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಅಂಬೇಡ್ಕರ್ ಅನುಯಾಯಿಗಳು ಪಾಲ್ಗೊಂಡಿದ್ದರು.