2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತನ್ನ ಐದು ಗ್ಯಾರೆಂಟಿಗಳ ಪೈಕಿ ಮೊದಲಿಗೆ ‘ಶಕ್ತಿ ಯೋಜನೆ’ಯನ್ನು ಜೂನ್ 11ರಂದು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವುದಾಗಿದೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿರ್ವಾಹಕರು ಇನ್ಸೆಂಟಿವ್ ಆಸೆಗೋಸ್ಕರ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಬೀಸಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅ.11 ರಿಂದ ಅ.14ರವರೆಗೆ ನಾಲ್ಕು ನಿಗಮದ ಬಸ್‌ಗಳಲ್ಲಿ 77,56,72,604 ಮಹಿಳೆಯರು ಸಂಚರಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1808,45,54, 754 ಆಗಿದೆ. ಪ್ರತಿನಿತ್ಯ ಅಂದಾಜು 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಮಹಿಳಾ ಪ್ರಯಾಣಿಕರ ಸಾರಿಗೆ ವೆಚ್ಚವನ್ನು ಸರ್ಕಾರ ನಿಗಮಗಳಿಗೆ ನೀಡುತ್ತಿದೆ.
ಆದರೆ, ಈ ಯೋಜನೆಯ ದುರುಪಯೋಗ ಪಡೆದುಕೊಂಡ ಕೆಲವು ಬಸ್ ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೆಜೆಸ್ಟಿಕ್ನಿಂದ–ತಾವರಕೆರೆಗೆ ಹೋಗುವ (242-ಬಿ) ಬಿಬಿಎಂಟಿಸಿ ಬಸ್ನ ನಿರ್ವಾಹಕರೊಬ್ಬರು ಅ. 15ರಂದು ಬೇಕಾಬಿಟ್ಟಿಯಾಗಿ ಹೆಚ್ಚಿನ ಇನ್ಸೆಂಟಿವ್ ಆಸೆಗೆ ಬಿದ್ದು, ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಟಿಕೆಟ್‌ಗಳನ್ನು ಹರಿದು ಬಿಸಾಕಿದ್ದಾರೆ.
ನಿರ್ವಾಹಕರ ಈ ವರ್ತನೆ ಕಂಡು ಮಹಿಳಾ ಪ್ರಯಾಣಿಕರೊಬ್ಬರು ಯಾಕೆ ಈ ರೀತಿ ಟಿಕೆಟ್ ಹರಿದು ಬೀಸಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರೈತರಿಗೆ ಬರ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಾಜಿ ಪ್ರಧಾನಿಗೆ ಮನವಿ
ಸುಖಾಸುಮ್ಮನೇ ಮಹಿಳೆಯರಿಗೆ ಮೀಸಲಾಗಿರುವ ಉಚಿತ ಟಿಕೆಟ್‌ಗಳನ್ನು ಹರಿದು, ನಿಗಮಗಳಿಗೆ ನಿರ್ವಾಹಕರು ಹೆಚ್ಚಿನ ಲೆಕ್ಕ ತೋರಿಸುತ್ತಾರೆ. ಇದರಿಂದ ಹೆಚ್ಚಿನ ಫ್ರೀ ಟಿಕೆಟ್ ತೋರಿಸಿದರೇ ಹೆಚ್ಚು ಇನ್ಸೆಂಟಿವ್ ಬರಬಹುದು ಎಂಬ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ಇಂತಹ ನಿರ್ವಾಹಕರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರು” ಎಂದು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಎಂಟಿಸಿ ಚೀಫ್ ವಿಜಿಲೆನ್ಸ್ ಆಫೀಸರ್ ಪ್ರಭಾಕರ ರೆಡ್ಡಿ, “ಬಿಎಂಟಿಸಿಯಲ್ಲಿ 26 ಸಾವಿರ ಜನ ನಿರ್ವಾಹಕರು/ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ 5600 ಟ್ರಿಪ್ ಹೋಗುತ್ತವೆ. ಪ್ರತಿ ಬಸ್ ಅನ್ನು ಲೈನ್ ಚೆಕ್ಕಿಂಗ್ ಮಾಡುತ್ತೇವೆ. ಬಸ್ ಡೀಪೋಗೆ ಬಂದ ತಕ್ಷಣ ಇಟಿಎಂ ಮೆಷಿನ್ ಚೆಕ್ ಮಾಡುತ್ತೇವೆ. ಮಹಿಳಾ ಪ್ರಯಾಣಿಕರು ಎಷ್ಟಿದ್ದಾರೆ? ಪುರುಷ ಪ್ರಯಾಣಿಕರು ಎಷ್ಟಿದಾರೆ? ಎಷ್ಟು ಆದಾಯ ಬಂದಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸದ್ಯ ನಿರ್ವಾಹಕರೊಬ್ಬರು ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದಿರುವ ಬಗ್ಗೆ ಮಾಹಿತಿ ಬಂದಿದೆ. ನಿರ್ವಾಹಕರ ವಿರುದ್ಧ ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ವಿವರಿಸಿದರು.