- ವೀರಶೈವ ಲಿಂಗಾಯತರ ನೇತೃತ್ವದಲ್ಲಿ ನಡೆದ ಇಫ್ತಿಯಾರ್ ಕೂಟ
- ಅಂಜುಮಾನ್ ಇಸ್ಲಾಂ ಕಮಿಟಿ ವತಿಯಿಂದ ಆಹಾರದ ಕಿಟ್ ವಿತರಣೆ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಮುಸ್ಲಿಮರು ಆಚರಿಸುವ ರಂಜಾನ್ ತಿಂಗಳ ಉಪವಾಸದ ಹಿನ್ನೆಲೆಯಲ್ಲಿ ಮಂಗಳವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ಸೌಹರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂರು ಭಾಗವಹಿಸಿ ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು. ಗೋಗೇರಿ ಪರಿಸರದ ವೀರಶೈವ ಲಿಂಗಾಯತರು ಕೂಡಿಕೊಂಡು ಆಯೋಜಿಸಿದ ಈ ಸೌಹಾರ್ದ ಕೂಟದಲ್ಲಿ ನೂರಾರು ಜನರು ಭಾಗವಹಿಸಿ ಉಪವಾಸ ಪಾರಾಯಣಗೈದರು.
ಈ ವೇಳೆ ಶಿಕ್ಷಕ ಆರ್ ಕೆ ಬಾಗವಾನ ಮಾತನಾಡಿ, “ಕುರಾನ್ ಅವತೀರ್ಣಗೊಂಡ ತಿಂಗಳು ರಂಜಾನ್ ಆಗಿದೆ, ಆದ್ದರಿಂದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲ್ಲಿಸಲಿಕ್ಕಾಗಿ ಈ ಮಾಸದಲ್ಲಿ ಜಗತ್ತಿನಾದ್ಯಂತ ಉಪವಾಸ ವೃತವನ್ನು ಆಚರಿಸುತ್ತಾರೆ. ಇದರಿಂದ ಮನುಷ್ಯನಲ್ಲಿ ದೇವಭಯ ಮತ್ತು ಸಚ್ಯಾರಿತ್ರ್ಯದಂತಹ ಗುಣಗಳು ಹುಟ್ಟುತ್ತವೆ” ಎಂದು ಹೇಳಿದರು.
ಇಫ್ತಾರ್ ಕೂಟದ ನಂತರ ಗ್ರಾಮದ ಸಮಸ್ತ ನಾಗರಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಬಸವರಾಜ ಮೂಲಿಮನಿ, ಶೇಖರಪ್ಪ ಯಗರಿ, ಬಸಪ್ಪ ಗುಂಡೆ, ಮಹಾಲಿಂಗಪ್ಪ ಸೊಂಪೂರ, ಕೆ ಕೆ ಬಾಗವಾನ, ಮಲೀಕಸಾಬ ಬಾಗವಾನ, ಹುಚ್ಚುಸಾಬ ಬಡಿಗೇರ, ಗ್ರಾಂ.ಪಂ ಸದಸ್ಯ ಇಮಾಮ ಬಾಗವಾನ, ಕಾಲೇಸಾಬ ಬಾಗವಾನ, ಸಿಕಂದರ, ಗೌಡೇಶ ಗುಂಡೆ, ರುದ್ರೇಶ ಕೆರಿ ಹಾಗೂ ವಿದ್ಯಾರ್ಥಿಗಳು, ಸಮಾಜ ಸೇವಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಬಡವರಿಗೆ ಕಿಟ್ ವಿತರಣೆ
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನಗರದ ಜಾಮೀಯಾ ಮಸೀದಿಯಲ್ಲಿ ರಂಜಾನ ಹಬ್ಬದ ನಿಮಿತ್ತ ಮುಸ್ಲಿಂ ಸಮುದಾಯದ ಬಡ ವರ್ಗದವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.
ನಂತರ, ಅಂಜುಮಾನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ ಡಿ ಕೋಲಕಾರ ಮಾತನಾಡಿ, “ರಂಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಬಡ ಕುಟುಂಬಗಳು ಹಬ್ಬವನ್ನು ಸಂತಸದಿಂದ ಆಚರಿಸಲಿ ಎಂಬ ಉದ್ದೇಶದಿಂದ ಸಂಸ್ಥೆಯು ಆಹಾರ ಧಾನ್ಯದ ಕಿಟ್ ಗಳನ್ನು ವಿತರಣೆ ಮಾಡುತ್ತಿದೆ” ಎಂದು ತಿಳಿಸಿದರು.
“ರಂಜಾನ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಯಾರೊಬ್ಬರು ಕೂಡ ಹಸಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಮುಸ್ಲಿಂ ಸಮುದಾಯದ ಬಡವರ್ಗದವರಿಗೆ ಸಂಸ್ಥೆ ವತಿಯಿಂದ ಕಿಟ್ ವಿತರಣೆ ಮಾಡುತ್ತಿದ್ದೇವೆ” ಎಂದರು.
ಜಾಮೀಯ ಮಸೀದಿಯ ಮೌಲಾನ ಖುಷ್ತಾರ ನೂರಾನಿ ಮಾತನಾಡಿ, “ಅಲ್ಲಾಹನ ಸೃಷ್ಟಿಯಲ್ಲಿ ಉಳ್ಳವರು ಇದ್ದಾರೆ, ಉಳ್ಳದವರೂ ಇದ್ದಾರೆ. ಇರುವವನು ಇಲ್ಲದವನಿಗೆ ಮಾಡಬೇಕಾದ ಧನ ಸಹಾಯ ಜಕಾತ್ ಮೂಲಕ ನಡೆದು ಹೋಗುತ್ತದೆ. ಜಕಾತ್ ದಾನವಾಗಲಿ, ಕೊಡುಗೆ ಯಾಗಲಿ ಅಲ್ಲ. ಅದು ಬಡವರ ಹಕ್ಕು. ಜಕಾತ್ ಸಮಾಜದ ಎಲ್ಲ ವರ್ಗದ ಜನಗಳಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಮಾನ ಅವಕಾಶ ನೀಡುತ್ತದೆ. ತನ್ಮೂಲಕ ಸೋದರತ್ವ ಭಾವನೆಯನ್ನು ಅವರಲ್ಲಿ ಬಿತ್ತುತ್ತದೆ” ಎಂದು ಧರ್ಮದ ಬಗ್ಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? : ಚಿಕ್ಕಬಳ್ಳಾಪುರ | ಸಚಿವ ಸುಧಾಕರ್ ಉಡುಗೊರೆ ನೀಡಿದ್ದ ಗ್ಯಾಸ್-ಸ್ಟೌ ಸ್ಫೋಟ
ಪುರಸಭೆ ಸದಸ್ಯ ರಾಜು ಸಾಂಗ್ಲಿಕಾರ ಮಾತನಾಡಿ, “ರಂಜಾನ್ ತಿಂಗಳಿನಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವುಳ್ಳವರು ಕಡ್ಡಾಯವಾಗಿ ಅರ್ಹರಿಗೆ ಜಕಾತ್ (ದಾನ) ನೀಡಲೇಬೇಕಾಗಿದೆ. ಧನಿಕರ ಸ್ವತ್ತಿನಲ್ಲಿರುವ ಬಡವರ ಹಕ್ಕಿಗೆ ಜಕಾತ್ ಎಂದು ಕರೆಯುತ್ತಾರೆ. ಜಕಾತ್ ಇಸ್ಲಾಂ ಧರ್ಮದ ಆರ್ಥಿಕ ವ್ಯವಸ್ಥೆಯನ್ನು ಹಾಗೂ ಸಾಮಾಜಿಕ ಹೊಣೆಯನ್ನು ತಿಳಿಸಿಕೊಡುತ್ತದೆ” ಎಂದು ತಿಳಿಸಿದರು.
ಮೌಲಾನ ಖುಷ್ತಾರ ನೂರಾನಿ, ಮೌಲಾನಾ ರಫೀಕ, ಮೌಲಾನಾ ಯಾಸೀನ ದಿವ್ಯ ಸಾನಿಧ್ಯ ವಹಿಸಿದ್ದರು. 170ಕ್ಕೂ ಹೆಚ್ಚು ಆಹಾರ ಧಾನ್ಯದ ಕಿಟ್ ಗಳನ್ನು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಅಂಜುಮಾನ ಸಂಸ್ಥೆ ಉಪಾಧ್ಯಕ್ಷ ಎಂ ಎಚ್ ಜಾಲಿಹಾಳ, ಸಲೀಂ ಮನಿಯಾರ, ರಫೀ ಹವಾಲ್ದಾರ್, ಅಬ್ದುಲಸಾಬ ಕಾತರಕಿ, ದಾವಲಸಾಬ ತಾಳಿಕೋಟಿ, ನಾಸೀರ್ ಸುರಪೂರ, ಹಸನ ತಟಗಾರ ಸೇರಿದಂತೆ ಮುಸ್ಲಿಂ ಸಮಾಜದ ಭಾಂದವರು ಉಪಸ್ಥಿತರಿದ್ದರು.