ದೇಶದಲ್ಲಿ ಅಂತರ್ ಧರ್ಮಿಯ ಮದುವೆಗಳು ಸಾಮಾನ್ಯವಾಗಿ ನಿರಂತರ ನಡೆಯುತ್ತವೆ. ಮುಸ್ಲಿಂ ಹೆಣ್ಣುಮಕ್ಳಳೂ ಕೂಡ ಅವರ ಇಚ್ಚಾನುಸಾರವಾಗಿ ಹಿಂದು ಮತ್ತು ಕ್ರಿಸ್ಟಿಯನ್ ಹುಡುಗರ ಜೊತೆ ಮದುವೆ ಆಗುವುದೂ ಇದೆ. ಬಲಾತ್ಕಾರವಾಗಿ ಇಂತಹ ಘಟನೆಗಳು ನಡೆದರೆ ಅದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಅರ್ಥದಲ್ಲಿ ಹುಡುಗಿಯ ಅಥವಾ ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ಆಗುವುದು ಸಹ ಸಮಾಜಕ್ಕೆ ಆರೋಗ್ಯಕರ ಬೆಳವಣಿಗೆ ಅಲ್ಲ, ಇಂತಹ ಪ್ರಕರಣಗಳಲ್ಲಿ ಪೋಷಕರು ಹೆಣ್ಣು ಮಕ್ಕಳ ಮನವೊಲಿಸಿ ಅವರನ್ನು ವಾಪಾಸು ಮನೆಗೆ ಕಳಿಸುವ ಪ್ರಯತ್ನ ಮಾಡುವುದು ಒಳ್ಳೆಯದು, ಇನ್ನು ಉಡುಪಿಯಲ್ಲಿ ನಡೆದ ಅಂತರ್ ಜಾತಿಯ ಪ್ರೇಮ ಪ್ರಕರಣದಲ್ಲಿ ಅಂತಹ ಯಾವುದೇ ವಿಷಯ ಅಥವಾ ಸಂಘ ಪರಿವಾರದವರು ಹೇಳುವ ರೀತಿಯ ಲವ್ ಜಿಹಾದ್ ಎಂಬ ಯಾವುದೇ ಕಪೋಲಕಲ್ಪಿತ ಸಂಚು ನಡೆದಿಲ್ಲ. ಆ ಹೆಣ್ಣುಮಗಳು, ತನ್ನ ಒಪ್ಪಿಗೆಯ ಮೇರೆಗೆ ಹುಡುಗನೊಂದಿಗೆ ಹೋಗಿದ್ದಾಳೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಅದೂ ಅಲ್ಲದೆ, ಈ ವಿಷಯ ಹೈಕೋರ್ಟ್ ನಲ್ಲಿ ಇರುವುದರಿಂದ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ಅದನ್ನು ಗೌರವಿಸಬೇಕು.ಅದನ್ನು ಬಿಟ್ಟು ರಾಜಕೀಯ ಲಾಭ ಪಡೆಯಲು ಸಂಘ ಪರಿವಾರ ಮತ್ತು ಬಿಜೆಪಿ ಮುಸ್ಲಿಂ ವಿರೋಧಿ ಕಥೆಗಳನ್ನು ಕಟ್ಟಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕಾರ್ಯ ಕೈಬಿಡಬೇಕು ಎಂದು ಹೇಳಿದ್ದಾರೆ.