ಮುಸ್ಲಿಮರು ಪಂಕ್ಚರ್ ಹಾಕುವವರು ಎಂಬ ಅತ್ಯಂತ ಕೆಟ್ಟ ಹೇಳಿಕೆಯ ಮೂಲಕ ಪ್ರಜೆಗಳನ್ನು ಜಾತಿ ಧರ್ಮವಾಗಿ ವಿಂಗಡಿಸುವುದೂ ಅಲ್ಲದೆ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಮತ್ತು ಅಪಮಾನಿಸುವುದು ಒಬ್ಬ ಪ್ರಧಾನಿಗೆ ಭೂಷಣವಲ್ಲ. ಇದೊಂದು ರೀತಿಯ ವಿಕೃತಿ. ಇದರಿಂದ ದೇಶದ ರಾಜಕಾರಣ ತನ್ನ ಘನತೆಯನ್ನು ಕಳೆದುಕೊಳ್ಳುತ್ತದೆ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರ್ಫುದ್ದಿನ್ ಶೇಖ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಮೊದಲ ಶಿಕ್ಷಣ ಮಂತ್ರಿ ಅಬುಲ್ ಕಲಾಂ ಆಝಾದ್, ಫಾತಿಮಾ ಶೇಕ್, ಫಕ್ರುದ್ದೀನ್ ಅಲಿ ಅಹಮದ್, ವೀರ್ ಅಬ್ದುಲ್ ಹಮೀದ್, ಎ ಪಿ ಜೆ ಕಲಾಂ, ಮೌಲಾನ ವಹಿದುದ್ಧಿನ್ ಖಾನ್, ಡಾ.ಮಿರ್ಝ ಯಾವರ್ ಬೇಗ್, ಡಾ.ಜಾವೆದ್ ಜಮೀಲ್, ಹೀಗೆ ಪ್ರಾರಂಭವಾಗಿ ಕಿತ್ತಳೆ ಹಣ್ಣು ಮಾರಿ ಜಗತ್ತಿನ ಮೆಚ್ಚುಗೆ ಪಡೆದು ಪದ್ಮಶ್ರೀ ಪಡೆದ ಹರೇಕಳ ಹಾಜಬ್ಬರ ತನಕ ಮುಸ್ಲಿಂ ಸಾಧಕರ ಇತಿಹಾಸ ದೊಡ್ಡದಿದೆ. ದೇಶಕ್ಕೆ ಕೊಡುಗೆ ನೀಡಿದ ಮತ್ತು ಸೇನೆಯಲ್ಲಿ ಹುತಾತ್ಮರಾದ ಮುಸ್ಲಿಂ ಸಾಧಕರ ಪಟ್ಟಿ ಮತ್ತು ವಿವರ ಪೂರ್ತಿ ನೀಡಿದರೆ ಓದಲು ಪ್ರಧಾನಿ ಮೋದಿಯವರಿಗೆ ತಮ್ಮ ಉಳಿದ ಆಯುಷ್ಯ ಸಾಲದು.
ಪ್ರಧಾನ ಮಂತ್ರಿ ಮೋದಿಯವರು ತಾವು ಆಳುವ ದೇಶದ ಪ್ರಜೆಗಳ ಕುರಿತು ಆಡುವ ಭಾಷೆಯಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು. ಮುಸ್ಲಿಮರ ಕುರಿತು ಆಡಿದ ಮಾತುಗಳು ಖಂಡನೀಯ ಎಂದು ಹೇಳಿದ್ದಾರೆ.