ಶಿವಮೊಗ್ಗ, ಕಂಪನಿಯೊಂದರ ಮ್ಯಾನೇಜರ್ ಎಂದು ನಂಬಿಸಿ ಮಹಿಳೆಯೋರ್ವರಿಗೆ ಕರೆ ಮಾಡಿದ ವಂಚಕನೋರ್ವ, ಬೈಕ್ ಲೋನ್ ಬಾಕಿ ನೆಪ ಹೇಳಿ ಆನ್’ಲೈನ್ ಮೂಲಕ ಸಾವಿರಾರು ರೂ. ಪಡೆದು ವಂಚಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಸೌಮ್ಯಾ (35) ಎಂಬುವವರು ವಂಚನೆಗೊಳಗಾದವರು. ಈ ಸಂಬಂಧ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯ ಮೊಬೈಲ್ ಫೋನ್ ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ವಂಚಕನು ಕಂಪೆನಿಯೊಂದರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬೈಕ್ ಲೋನ್ ಬಾಕಿಯಿರುವುದಾಗಿ ತಿಳಿಸಿ, ವಿವಿಧ ರೀತಿಯ ಚಾರ್ಜಸ್ ಪಾವತಿಸುವಂತೆ ಸೂಚಿಸಿದ್ದಾನೆ.
ವಂಚಕನ ಮಾತು ನಂಬಿದ ಮಹಿಳೆಯು 27,900 ರೂ.ಗಳನ್ನ ಆನ್’ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ವಂಚನೆಗೊಳಗಾಗಿರುವುದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.