ವಿಶೇಷ ಮತ್ತು ಅರ್ಥಪೂರ್ಣವಾದ ಕಲಿಕಾ ಹಬ್ಬದ ಆಚರಣೆಗೆ ಶಿವಮೊಗ್ಗ ನಗರದ ದೊಡ್ಡಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಾಕ್ಷಿಯಾಗಿದೆ.
ಶ್ರೀಮತಿ ಶಶಿರೇಖಾ ಜಿ ಶಿಕ್ಷಕಿ ಇವರು ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು . ಮುಖ್ಯ ಶಿಕ್ಷಕಿಯಾದ ಶ್ರೀಮತಿ ರೇಣುಕಮ್ಮ ಇವರು ಗಣ್ಯರನ್ನು ಆದರದಿಂದ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, “1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳ ಎಫ್ಎಲ್ ಕಲಿಕೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು, ಕೊರೋನಾದ ನಂತರದ ಕಲಿಕೆಯ ಕೇಂದ್ರವನ್ನು ಸರ್ಕಾರಿ ಶಾಲೆಯಲ್ಲಿ ನೀಗಿಸಿರುವುದನ್ನು ಸಾಕ್ಷೀಕರಿಸಲು ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ” ಎಂದರು.

ಮುಖ್ಯ ಅತಿಥಿಗಳಾಗಿ ಹಾಜರಿದ್ದ ದನಂಜಯ್ ಬಿ ಆರ್ ಪಿ ಶಿವಮೊಗ್ಗ ಇವರು, ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರು, ಸಮುದಾಯ ಹಾಗೂ ಶಿಕ್ಷಕರ ಭಾಗಿದಾರಿಕೆಯ ಅಗತ್ಯತೆಯ ಬಗ್ಗೆ ವಿವರಿಸಿದರು. ವಿವಿಧ ಸರ್ಕಾರಿ ಶಾಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಓದು ಬರಹ ಗಣಿತ ಲೆಕ್ಕಗಳನ್ನು ಬಿಡಿಸುವ ಕೌಶಲಗಳನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡು ತಮ್ಮ ಕಲಿಕಾ ಪ್ರಭುತ್ವವನ್ನು ಪ್ರದರ್ಶಿಸಿ ಪ್ರಶಸ್ತಿಯ ಗರಿಮೆಯನ್ನು ಪಡೆದುಕೊಂಡರು.

ಶಿಕ್ಷಕರು ತಂದಿದ್ದ ವಿವಿಧ ಪಠ್ಯಗಳನ್ನು ವಿದ್ಯಾರ್ಥಿಗಳು ನಿರರ್ಗಳವಾಗಿ ಓದುವ ಮೂಲಕ ಗಟ್ಟಿ ಓದನ್ನು ಪ್ರದರ್ಶಿಸಿದರು. ತಮ್ಮ ಅಜ್ಜ ಅಜ್ಜಿ ಅಪ್ಪ ಅಮ್ಮ ಹೇಳಿದ ಕಥೆಗಳನ್ನು ನೆನಪಿಟ್ಟುಕೊಂಡು ಹವಭಾವಗಳೊಂದಿಗೆ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ನಂತರ ಗಣಿತ ಕಲಿಕೆಯನ್ನು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರದರ್ಶಿಸಿದರು.

ಪೋಷಕರು ವಿದ್ಯಾರ್ಥಿಗಳ ಜೊತೆಗೆ ಬೆರೆತು ಕಥೆಯನ್ನು ಕಟ್ಟಿ ಅಭಿನಯದ ಮೂಲಕ ಹೇಳಿ ಪೋಷಕರು ಮತ್ತು ಮಕ್ಕಳ ಸಹ ಸಂಬಂಧಕ್ಕೆ ಹೊಸ ಭಾಷ್ಯ ಬರೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಹ ವಿಶೇಷ ಬಹುಮಾನದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಾವು ಕಲಿತ ಕಲಿಕೆಯನ್ನು ಸಂಭ್ರಮ ಸಡಗರದಿಂದ ಹಬ್ಬದ ವಾತಾವರಣದಲ್ಲಿ ಆಚರಿಸಿಕೊಂಡಿದ್ದು ವಿನೂತನ ಕಾರ್ಯಕ್ರಮದ ಔಚಿತ್ಯವನ್ನು ಎತ್ತಿ ತೋರಿಸುತ್ತಿತ್ತು.
ಇದನ್ನೂ ಓದಿ:ಶಿವಮೊಗ್ಗ | ಎರಡನೇ ದಿನಕ್ಕೆ ಕಾಲಿಟ್ಟ ನೀರು ಸರಬರಾಜು ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಕಾರ್ಯಕ್ರಮವನ್ನು ಎಲ್ಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
