ಶಿವಮೊಗ್ಗದ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಯುವಕ ಊಟದ ಕೊಠಡಿಯಲ್ಲಿ ಬಿಯರ್ ಬಾಟಲಿ ಇಟ್ಟುಕೊಂಡಿದ್ದ. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿದ್ದಾರೆ. ಹಣ ಕೊಡದಿದ್ದರೆ ವಿಡಿಯೊ ಹರಿಬಿಡುವುದಾಗಿ ಬೆದರಿಸಲಾಗಿದೆ. ಈ ವೇಳೆ ಯುವತಿ ಬಳಿ ಇದ್ದ ₹24,000 ಹಣ, ಗೂಗಲ್ ಪೇ ಮೂಲಕ ಯುವಕನಿಂದ ₹1500 ವರ್ಗಾಯಿಸಿಕೊಂಡಿದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವಕ ಮತ್ತು ಯುವತಿಯನ್ನು ಆಟೋದಲ್ಲಿ ಕರೆತಂದು ಎಂಆರ್‌ಎಸ್ ಸರ್ಕಲ್ ಬಳಿ ಬಿಟ್ಟು, ಅವರ ಬೈಕ್ ಕೊಟ್ಟು ಕಳುಹಿಸಲಾಗಿದೆ. ರಾತ್ರಿಯೊಳಗೆ ಒಂದೂವರೆ ಲಕ್ಷ ರೂಪಾಯಿ ಹಣ ಕೊಡದಿದ್ದರೆ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಒಡ್ಡಿದಾರೆಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಿಂಚಣಿ ಕೊಡುಗೆಗಾಗಿ ವಿದ್ಯುತ್ ದರ ಹೆಚ್ಚಳ; ಸಾರ್ವಜನಿಕರ ಆಕ್ರೋಶ
ಯುವಕನಿಗೆ ಕರೆ ಮಾಡಿದ್ದ ಅಪರಿಚಿತರು ಹಣ ತಂದು ಕೊಡುವಂತೆ ಬೆದರಿಸಿದ್ದರು. ₹6000 ಹಣದೊಂದಿಗೆ ಯುವಕ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಬಂದಿದ್ದ. ಆಟೋದಲ್ಲಿ ಬಂದ ಯುವಕರಿಗೆ ₹6000 ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಒಂದೂವರೆ ಲಕ್ಷ ರೂ. ಹಣ ನೀಡುವಂತೆ ಪೀಡಿಸಿದ್ದು, ಜೀವ ಬೆದರಿಕೆ ಒಡ್ಡಿದ್ದಾರೆಂದು ಆಪಾದಿಸಲಾಗಿದೆ.
ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
