ನನ್ನ ಸೇವೆ ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ನನ್ನ ತಂದೆ ಯವರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಕನ್ನಡ ಉಳಿಯಬೇಕು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ನನ್ನ ಕರ್ತವ್ಯ ಮಾಡುವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಾಹಿತ್ಯ ಗ್ರಾಮದಲ್ಲಿ ಬಂಗಾರಪ್ಪನವರ ಗ್ರಂಥಾಲಯಕ್ಕೆ 5 ಲಕ್ಷ ರೂ. ನಗದು ಹಣ ದೇಣಿಗೆ ನೀಡಿ ಮಾತನಾಡಿ, “ನಮ್ಮ ತಂದೆಯವರು ಬೀದಿ ದೀಪದಲ್ಲಿ ಓದುತ್ತಿದ್ದರು. ಕನ್ನಡದ ಕುರಿತು ಹೆಚ್ಚು ಅಭಿಮಾನ ಇದೆ. ಪುಸ್ತಕ ಓದುವುದು ಒಳ್ಳೆಯ ಸ್ನೇಹಿತನಿಗೆ ಸಮಾನ. ಒಬ್ಬ ಒಳ್ಳೆಯ ಸ್ನೇಹಿತ ಜೀವನ ಪೂರ್ತಿ ಇರುತ್ತಾನೆ. ಹಾಗಾಗಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಅನೇಕ ಸಾಹಿತಿಗಳನ್ನು ಕೊಡುಗೆಯಾಗಿ ಕೊಟ್ಟ ಶಿವಮೊಗ್ಗದಂತಹ ಜಿಲ್ಲೆಯಲ್ಲಿಯೇ ಸಾಹಿತ್ಯ ಸಭಾಂಗಣವೊಂದು ಇಲ್ಲದಿರುವುದು ಸರಿಯಲ್ಲ. ಯಾವಾಗಲೋ ಆಗಬೇಕಿದ್ದ ಸಭಾಂಗಣ ಈಗ ಸುಮಾರು 2.5 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣವಾಗುತ್ತಿದೆ. ಇದು ಕನ್ನಡಾಭಿಮಾನಕ್ಕಾಗಿ ಮಾಡುತ್ತಿರುವ ಸಣ್ಣ ಸೇವೆಯಷ್ಟೇ” ಎಂದರು.
“ಪ್ರಸ್ತುತ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ಹಿರಿಯರ ಚಿಂತನೆಯ ಮೂಲಕ ಮೊದಲ ಭಾಷೆ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಬೇಕು. ನನ್ನ ರಕ್ತ ಕನ್ನಡದ್ದು ಎನ್ನುವ ಮನೋಭಾವ ಬರಬೇಕು. ನಮ್ಮ ಪ್ರಚಾರ ಕನ್ನಡಕ್ಕೆ ಉಪಯೋಗ ಆಗುತ್ತದೆ ಎಂದರೆ ನಾನು ಬಂದು ಪ್ರಚಾರ ಮಾಡಲಿಕ್ಕೂ ಸಿದ್ಧ. ಎಂತಾದರೂ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ದುಪ್ಪಟ್ಟಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಪೊಲೀಸ್ ವಿಶೇಷ ಗಸ್ತು; 197 ಪ್ರಕರಣ ದಾಖಲು
“ಪ್ರಸ್ತುತ ನಡೆಯುತ್ತಿರುವ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನದಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುವ ಮೂಲಕ ಯುವಕರಲ್ಲಿ ಹುರುಪು ತುಂಬಬೇಕು. ಬಂಗಾರಪ್ಪ ಅವರು ಸುಮಾರು 40 ನಿಮಿಷ ಕುವೆಂಪು ಅವರ ಕುರಿತು ಸುದೀರ್ಘವಾಗಿ ಮಾತನಾಡಿದ್ದರು. ಅವರ ಹೆಸರಿನಲ್ಲಿ ಅಚ್ಚುಕಟ್ಟಾಗಿ ಗ್ರಂಥಾಲಯ ಮಾಡುವುದು ಹೆಮ್ಮೆಯ ವಿಷಯ” ಎಂದರು.
ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ್, ಮಂಜುನಾಥ ಗೌಡ, ಬಲ್ಕಿಸ್ ಬಾನು, ಚಂದ್ರ ಭೂಪಾಲ್, ವಿಜಿ, ರಮೇಶ್ ಹೆಗಡೆ, ಡಿ. ಮಂಜುನಾಥ ಹಾಗೂ ಇತರರು ಇದ್ದರು.
