ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ ಖಂಡ್ರೆ ಅವರ ಬಣ್ಣದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಅವರ ಮಾತುಗಳು ಜಾತಿ, ಧರ್ಮ, ಸಮುದಾಯಗಳನ್ನು ದ್ವೇಷಿಸುವ ಬಿಜೆಪಿಯ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತವೆ ಎಂದು ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಆರಗ ಜ್ಞಾನೇಂದ್ರ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಬಾಯ್ತಪ್ಪಿನಿಂದ ಖರ್ಗೆ ಅವರ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ ಎಂದರೆ ನಂಬಲಾಗದು. ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವ ಅವರ ಶಾಸಕ ಸ್ಥಾನವನ್ನು ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಯಾವ ಬಿಜೆಪಿ ನಾಯಕರೂ ಖಂಡಿಸಿಲ್ಲ. ಬಿಜೆಪಿಗರ ಮೌನ, ಜಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸುವಂತಿದೆ. ಈ ಹಿಂದೆ ಸಂಸದ ಅನಂತ ಕುಮಾರ್ ಹೆಗೆಡೆ ಅವರು ಸಂವಿಧಾನದ ವಿರುದ್ಧ ಮಾತನಾಡಿದಾಗಲೂ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮುಸ್ಲಿಂ ಓಟುಗಳೇ ಬೇಡವೆಂದು ದ್ವೇಷದ ಹೇಳಿಕೆ ನೀಡಿದಾಗಲೂ ಬಿಜೆಪಿಗರು ಮೌನವಾಗಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿಗರು ಒಪ್ಪಿಕೊಂಡಿದ್ದಾರೆ. ಆದರೆ, ಮತದಾರರನ್ನು ಮಂಗ ಮಾಡಲು ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಆದರೆ, ಆ ವರದಿಯನ್ನು ಮೋದಿ ಸರ್ಕಾರ ಅದನ್ನು ಒಪ್ಪಿಕೊಂಡಿದೆ. ಪ್ರತಿಭಟನೆ ಮಾಡುವುದಿದ್ದರೆ ಮೋದಿ ವಿರುದ್ದ ಮಾಡಲಿ” ಎಂದು ಅವರು ಹೇಳಿದ್ದಾರೆ.