ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಅತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರಿಂದ ಮನ ನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೊನ್ನೆಕೊಪ್ಪ ಗ್ರಾಮದ ನಿವಾಸಿ ಮಂಜುನಾಥ್ (28) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಜೂನ್ 11ರಂದು ಹೊಳೆಹೊನ್ನೂರಿನಲ್ಲಿ ಪೊಲೀಸ್ ಸಿಬ್ಬಂದಿಗಳು ಆತನ ಮೇಲೆ ಸಾರ್ವಜನಿಕವಾಗಿ ಥಳಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಮಂಜುನಾಥ್ ಪತ್ನಿ ಪೊಲೀಸ್ ಠಾನೆಯಲ್ಲಿ ದೂರು ನೀಡಿದ್ದು, ತನ್ನ ಪತಿಯ ಸಾವಿಗೆ ಪೊಲೀಸರೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಜೂನ್ 11ರಂದು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ಮಂಜುನಾಥ್ ನಿಂತಿದ್ದರು. ಈ ವೇಳೆ, ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ವಿನಾಕಾರಣ ಮಂಜುನಾಥ್‌ಗೆ ಥಳಿಸಿ, ಪೊಲೀಸ್ ಠಾಣೆಗೆ ಎಳೆದೊಯ್ದರು. ಅಂದು ಸಂಜೆ ಅವರ ತಮ್ಮ ಹೋಗಿ ಬಿಡಿಸಿಕೊಂಡು ಬಂದರು” ಎಂದು ಮಂಜುನಾಥ್ ಪತ್ನಿ ವಿವರಿಸಿದ್ದಾರೆ.
“ಘಟನೆಯಿಂದ ದಿಗ್ಭ್ರಾಂತನಾಗಿದ್ದ ಮಂಜುನಾಥ್ ಖಿನ್ನತೆಗೆ ಒಳಗಾಗಿದ್ದರು. ಜೂನ್ 15ರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.